ಹಡಪದ ಅಪ್ಪಣ್ಣನವರು ಕಾಯಕ ನಿಷ್ಠೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದ ಶರಣರು

(ಸಂಜೆವಾಣಿ ವಾರ್ತೆ)
ವಿಜಯಪುರ : ಜು.4:ಶ್ರೀ ಹಡಪದ ಅಪ್ಪಣ್ಣ ಸೇವ ಸಂಘ (ರಿ) ಯಂಭ್ನಾಳ ವತಿಯಿಂದ ಶ್ರೀ ಹಡಪದ ಅಪ್ಪಣ್ಣನವರ 889ನೇ ಜಯಂತಿ ಆಚರಣೆಯನ್ನು ಬಸವನ ಬಾಗೇವಾಡಿ ತಾಲೂಕಿನ ಯಂಭತ್ನಾಳ ಗ್ರಾಮದಲ್ಲಿ ಜರುಗಿತು.
ಗ್ರಾಮದ ಹಿರಿಯರಾದ ಶರಣು ಸಾವುಕಾರ ಮಾತಾಳಿ ಅವರು ಪೂಜೆ ಸಲ್ಲಿಸಿ ಮಾತನಾಡಿ, 12ನೇ ಶತಮಾನವು ಸಮಾನತೆಗಾಗಿ ಹೋರಾಡಿದ ಕಾಲ ಹಾಗೂ ಅದು ಒಂದು ಕ್ರಾಂತಿಕಾರಿ ಯುಗವಾಗಿತ್ತು. ಈ ಕಾಲದಲ್ಲಿ ಬಸವಣ್ಣನವರು ಸಮಾನತೆ ಸಾರುವುದರ ಜತೆಗೆ ಅನುಭವ ಮಂಟಪದ ಮೂಲಕ ನೂರಾರು ಶರಣರನ್ನು ಒಂದೆಡೆ ಸೇರಿಸಿ, ಜಾತೀಯತೆ, ಶೋಷಣೆಗಳ ವಿರುದ್ಧ ಹೋರಾಟ, ಸಾಮಾಜಿಕ ಸುಧಾರಣೆ, ಸಮಾನತೆಗಾಗಿ ಚರ್ಚೆ ನಡೆಸಿದ್ದ ಶರಣರು, ಅಲ್ಲಿಯೇ ಕಲ್ಯಾಣ ಕ್ರಾಂತಿಯನ್ನುಂಟು ಮಾಡಿದ್ದಾರೆ. ಅನುಭವ ಮಂಟಪದ ಸಭೆಯು ಯಶಸ್ವಿಯಾಗಲು ಹಡಪದ ಅಪ್ಪಣ್ಣನವರ ಶ್ರಮ ಪ್ರಮಖವಾದದ್ದಾಗಿದೆ. ಜಗಜ್ಯೋತಿ ಬಸವೇಶ್ವರರ ಆಪ್ತರಾಗಿದ್ದ ಅಪ್ಪಣ್ಣನವರು ತಮ್ಮ ಕಾಯಕ ನಿಷ್ಠೆ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಿದ್ದಾರೆ ಎಂದರು. ಶರಣರು ಹಾಕಿಕೊಟ್ಟ ಮಾರ್ಗವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಸದಸ್ಯರಾದ ಚಂದ್ರಶೇಖರ ಹೂಗಾರ, ನಿಂಗೊಂಡ ಯರನಾಳ, ಸಿದ್ದು ಹೊಸಮನಿ, ಬೂತಾಳಿ ಪೂಜಾರಿ, ಶಿಕ್ಷಕರಾದ ಶಿವಾನಂದ ಮಂಗಾನವರ, ಆನಂದ ಮೂಲಿಮನಿ, ಹಡಪದ ಸಮಾಜದ ಮುಖಂಡರಾದ ಈರೇಶ ಹಡಪದ, ಮಲ್ಲಿಕಾರ್ಜುನ ಹಡಪದ, ಮಂಜುನಾಥ ಹಡಪದ, ಭೀಮರಾಯ ಹಡಪದ, ಶ್ರೀಶೈಲ ಹಡಪದ ಇವರು ಉಪಸ್ಥಿತರಿದ್ದರು.