ಹಟ್ಟಿ : ಮೂವರು ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

ರಾಯಚೂರು.ಜು.೧೯- ಹಟ್ಟಿ ಚಿನ್ನದ ಗಣಿ ಕಂಪನಿಯ ಕಾಲೋನಿವೊಂದರಲ್ಲಿ ಎರಡು ಗಂಧದ ಮರಗಳನ್ನು ಕಡಿದು ಕಳುವು ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಹಟ್ಟಿ ಪೊಲೀಸರ ತಂಡ ಮೂವರ ಕುಖ್ಯಾತ ಶ್ರೀಗಂಧ ಕಳ್ಳರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಾಗಲಕೋಟೆಗೆ ಸೇರಿದ ಈ ಮೂವರನ್ನು ಮಾರುತಿ ಅಲಿಯಾಸ್ ಹನುಮಪ್ಪ ತಂದೆ ಚಂದ್ರಪ್ಪ (೩೫), ರಾಮಣ್ಣ ತಂದೆ ಉತ್ತಮಪ್ಪ (೬೨) ಹಾಗೂ ಬಂದೆ ನವಾಜ್ ತಂದೆ ರಂಜಾನ್ ಸಾಬ್ (೨೮) ಎಂದು ಗುರುತಿಸಲಾಗಿದೆ. ಜು.೧೮ ರಂದು ಬೆಳಗಿನ ಜಾವ ಹಟ್ಟಿ ಕ್ಯಾಂಪಿನ ಅಧಿಸೂಚಿತ ಪ್ರದೇಶದಲ್ಲಿರುವ ಲೋಟಸ್ ಕಾಲೋನಿಯ ಮನೆ ಹಿಂಬದಿಯಲ್ಲಿರುವ ಗಂಧದ ಮರಗಳನ್ನು ಬುಡ ಸಹಿತ ಕಡಿದು ಸಾಗಿಸಲಾಗಿತ್ತು. ಎರಡು ಗಂಧದ ಮರಗಳ ಬೆಲೆ ೫೦ ಸಾವಿರ ಎಂದು ನಿಗದಿ ಪಡಿಸಲಾಗಿದೆ. ಈ ಕುರಿತು ಸ್ಥಳೀಯ ಠಾಣೆಗೆ ಭದ್ರತಾ ಸಿಬ್ಬಂದಿಗಳಾದ ಬಸವರಾಜ, ನೀಡಿದ ದೂರಿನ ಮೇರೆಗೆ ಶೋಧ ನಡೆಸಿದಾಗ ಈ ಕುಖ್ಯಾತ ಶ್ರೀಗಂಧ ಕಳ್ಳರು ಪತ್ತೆಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್, ಹೆಚ್ಚುವರಿ ಎಸ್ಪಿ ಶಿವಕುಮಾರ ಹಾಗೂ ಲಿಂಗಸೂಗೂರು ಡಿಎಸ್ಪಿ ಮಂಜುನಾಥ ಅವರ ಮಾರ್ಗದರ್ಶನದಲ್ಲಿ ಹಟ್ಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಪ್ರಕಾಶ ಮಾಳಿ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. ಉದ್ದೇಶಿತ ತಂಡವೂ ನಡೆಸಿದ ತೀವ್ರ ಶೋಧ ಕಾರ್ಯದಲ್ಲಿ ೮೫ ಕೆಜಿ ಶ್ರೀಗಂಧ ಸೇರಿದಂತೆ ವಾಹನ ಮತ್ತು ಇತರೆ ಸಲಕರಣೆಗಳು ಸೇರಿ ಒಟ್ಟು ೬.೭೨ ಲಕ್ಷ ಮೌಲ್ಯದ ಸಾಮಾನುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ತನಿಖೆ ನಡೆಸಲಾಗಿದೆ.