ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ

ಕಾರ್ಮಿಕರಿಗೆ ಬೋನಸ್, ದುಪ್ಪಟ್ಟು ಉತ್ಪಾದನೆಗೆ ಆಧ್ಯತೆ : ವಜ್ಜಲ್
ಲಿಂಗಸುಗೂರು.ಡಿ.೨೨-ತಾಲೂಕಿನ ಪ್ರತಿಷ್ಠಿತ ಹಟ್ಟಿ ಚಿನ್ನದಗಣಿ ಕಾರ್ಮಿಕರಿಗೆ ಈ ಬಾರಿ ಕ್ರಿಸ್‌ಮಸ್ ಹಬ್ಬಕ್ಕೂ ಮುನ್ನವೇ ಬೋನಸ್ ನೀಡಲು ತೀರ್ಮಾನಿಸಲಾಗಿದೆ. ಜೊತೆಗೆ ಕಂಪನಿಯಲ್ಲಿ ಚಿನ್ನದ ಉತ್ಪಾದನೆ ದುಪ್ಪಟ್ಟು ಮಾಡಲು ಆಧ್ಯತೆ ನೀಡಲಾಗುವುದೆಂದು ಹಟ್ಟಿ ಚಿನ್ನದಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್ ಹೇಳಿದರು.
ಗಣಿ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳ ವಿಶೇಷ ಸಭೆ ಜರುಗಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಸ್ತುತವಾಗಿ ದಿನಕ್ಕೆ ೬ ಕೆ.ಜಿ. ಚಿನ್ನ ಉತ್ಪಾದನೆಯಾಗುತ್ತಿದೆ. ಇದರ ವೇಗವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬರುವ ದಿನಗಳಲ್ಲಿ ದಿನಕ್ಕೆ ಸುಮಾರು ೧೦ ಕೆ.ಜಿ. ವರೆಗೂ ಚಿನ್ನದ ಉತ್ಪಾದನೆ ಮಾಡಬೇಕೆಂದು ನಿರ್ಧರಿಸಲಾಗಿದೆ. ಹಟ್ಟಿ ಪಟ್ಟಣದಲ್ಲಿ ರಸ್ತೆ, ಒಳಚರಂಡಿ ಸೇರಿ ಅಭಿವೃದ್ಧಿಗೆ ಆಧ್ಯತೆ ನೀಡಲಾಗುವುದು. ಸೇವೆಯಲ್ಲಿ ಮೃತಪಟ್ಟ ಕಾರ್ಮಿಕರ ಮಕ್ಕಳಿಗೆ ಅಥವಾ ಸಂಬಂಧಿಕರಿಗೆ ಅನುಕಂಪದ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಹೇಳಿದರು. ಕಂಪನಿ ನಿರ್ದೇಶಕ ಶ್ರೀನಿವಾಸ ಈ ಸಂದರ್ಭದಲ್ಲಿದ್ದರು.