ಹಟ್ಟಿ ಚಿನ್ನದ ಗಣಿಯ ತ್ಯಾಜ್ಯ ಟೆಲಿಂಗ್ ಡಂಪ್ ವಿಲೇವಾರಿಗೆ ಅಗತ್ಯ ಕ್ರಮ

ರಾಯಚೂರು,ಮೇ.೨೦-ಹಟ್ಟಿ ಚಿನ್ನದ ಗಣಿ ಕಂಪನಿಯಿಂದ ಸಂಸ್ಕರಣಗೊಂಡು ಹೊರಬರುವ ತ್ಯಾಜ್ಯ ಟೆಲಿಂಗ್ ಡಂಪ್ ಶೇಖರಣೆಯಾದ ಸ್ಥಳಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಸಚಿವರು ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಮುರುಗೇಶ್ ನಿರಾಣಿ ಅವರು ಮೇ.೧೯ರ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಅಧಿಕಾರಿಗಳಿಂದ ಮಾಹಿತಿ ಪಡೆದರು.
ಈ ವೇಳೆ ಮಾತನಾಡಿದ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಪ್ರಕಾಶ್, ಚಿನ್ನದ ಗಣಿಯಲ್ಲಿ ಕಳೆದ ೭೦ ವರ್ಷಗಳಿಂದ ಸಂಗ್ರಹಗೊಂಡಿರುವ ೭೦ ಸಾವಿರ ಮೆಟ್ರಿಕ್ ಟನ್‌ಗಳಷ್ಟು ನಿರುಪಯುಕ್ತ ತ್ಯಾಜ್ಯ ಟೆಲಿಂಗ್ ಡಂಪ್ ಸಾಕಷ್ಟು ಸ್ಥಳವನ್ನು ಆಕ್ರಮಿಸಿಕೊಂಡಿದೆ, ಈಗಾಗಲೇ ಹಟ್ಟಿ ಚಿನ್ನದ ಗಣಿಗೆ ಸ್ಥಳದ ಅಭಾವ ಎದುರಾಗಿದ್ದು, ಸಂಗ್ರಹವಾಗಿರುವ ಈ ಟೆಲ್ಲಿಂಗ್ ಡಂಪ್‌ಅನ್ನು ಸ್ಥಳಾಂತರಗೊಳಿಸುವುದರಿಂದ ಮುಂದಿನ ದಿನಗಳಲ್ಲಿ ಕಂಪನಿಯ ನಿರುಪಯುಕ್ತ ಟೆಲ್ಲಿಂಗ್ ಡಂಪ್ ಸಂಗ್ರಹಿಸಲು ಅನುಕೂಲವಾಗಲಿದೆ, ಆದ ಕಾರಣ ಟೆಲಿಂಗ್ ಡಂಪ್‌ನ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವಂತೆ ಸಚಿವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ಈ ರೀತಿಯ ತ್ಯಾಜ್ಯವನ್ನು ಅಂತರಾಷ್ಟ್ರೀಯ ಮಟ್ಟದ ಕಂಪನಿಗಳು ನಿರ್ವಹಿಸುವ ಕ್ರಮಗಳ ಕುರಿತು ಅಧ್ಯಯನ ನಡೆಸಿ ವರದಿ ನೀಡಿದ್ದಲ್ಲೀ, ಅದರ ವಿಲೇವಾರಿಗೆ ಅವಕಾಶ ನೀಡಲಾಗುವುದು ಎಂದರು.
ಈ ಹಿಂದೆ ಖಾಸಗಿ ಕಂಪನಿಯೊಂದು ಟೆಲಿಂಗ್ ಡಂಪ್ ವಿಲೇವಾರಿಗೆ ಆಸಕ್ತಿ ತೋರಿಸಿತ್ತು, ಆದರೆ ಪರಿಸರ ಮಾಲೀನ್ಯ ಉಂಟಾಗುವ ಕಾರಣ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಈ ಕುರಿತು ಆಕ್ಷೇಪಣೆ ವ್ಯಕ್ತಪಡಿಸಿತ್ತು, ಹಾಗಾಗಿ ಆ ಸಂದರ್ಭದಲ್ಲಿ ಟೆಲಿಂಗ್ ಡಂಪ್ ವಿಲೇವಾರಿಗೆ ತಡೆ ಹಿಡಿಯಲಾಗಿತ್ತು ಎಂದು ಪ್ರಕಾಶ್ ತಿಳಿಸಿದರು.
ಸಂಸದರಾದ ರಾಜಾ ಅಮರೇಶ್ವರ ನಾಯಕ, ಹಟ್ಟಿ ಚಿನ್ನದ ಗಣಿ ಕಂಪನಿ ನಿಯಮಿತದ ಅಧ್ಯಕ್ಷ ಮಾನಪ್ಪ ವಜ್ಜಲ್, ಜಿಲ್ಲಾ ಕೈಗಾರಿಕಾ ಹಾಗೂ ವಾಣಿಜ್ಯೋದ್ಯಮ ಸಂಘದ ಅಧ್ಯಕ್ಷ ತ್ರಿವಿಕ್ರಮ ಜೋಷಿ, ಲಿಂಗಸೂಗೂರು ಸಹಾಯಕ ಆಯುಕ್ತ ರಾಜಶೇಖರ ಡಂಬಳ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ವಿಜ್ಞಾನಿ ವಿಶ್ವನಾಥ್, ಸೇರಿದಂತೆ ಹಟ್ಟಿ ಚಿನ್ನದ ಗಣಿ ಕಂಪನಿಯ ಹಿರಿಯ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.