ಹಜರತ ಖಾಜಾಬಂದಾ ನವಾಜ ದರ್ಗಾ: ಮೇ.24ರಿಂದ 620ನೇ ಉರುಸ್

ಕಲಬುರಗಿ,ಮೇ.22- ಸೌಹಾರ್ದತೆ ಮತ್ತು ಭಾವೈಕ್ಯತೆಯ ಸಂಕೇತವಾಗಿರುವ ಇಲ್ಲಿನ ಸುಪ್ರಸಿದ್ಧ ಸೂಫಿ ಸಂತ ಹಜರತ ಖಾಜಾ ಬಂದಾ ನವಾಜ ಗೇಸುದರಾಜ (ರಅ) ದರ್ಗಾದ 620ನೇ ಉರುಸ್ ಇದೇ ಮೇ 24, 25 ಮತ್ತು 26 ಮೂರು ದಿನಗಳ ಕಾಲ ಜರುಗಲಿದೆ ಎಂದು ದರ್ಗಾದ ಪೀಠಾಧಿಪತಿಗಳಾದ ಹಜರತ್ ಸೈಯದ್ ಶಾ ಖುಸ್ರೋ ಹುಸೈನಿ ಅವರು ತಿಳಿಸಿದ್ದಾರೆ
ಶುಕ್ರವಾರ 24ದಂದು ಸಂಜೆ ಹೊತ್ತಿಗೆ ನಗರದ ಮಹೆಬೂಬ್ ಗುಲಶನ್ ಗಾರ್ಡನ್ ನಿಂದ ಗಂಧದ ಮೆರವಣಿಗೆ ಮೂಲಕ ಸೂಪರ್ ಮಾರ್ಕೆಟ್ ಮಾರ್ಗವಾಗಿ ರಾತ್ರಿ ವೇಳೆ ದರ್ಗಾಕ್ಕೆ ಶ್ರೀಗಂಧದ ಸಂದಲ್ ಲೇಪನ ಸಂಪ್ರದಾಯ ಪೂರ್ಣಗೊಳಲಿದೆ.
25 ರಂದು ರಾತ್ರಿ ದರ್ಗಾದ ಆವರಣದಲ್ಲಿ ಸರ್ವ ಭಕ್ತರಿಂದ ಸಾಂಪ್ರದಾಯಿಕ ದೀಪಲಂಕಾರ (ಮಹಫಿಲ್ ಎ ಚಿರಾಗ್) ಕಾರ್ಯಕ್ರಮ ಜರುಗಲಿದ್ದು, ಭಾನುವಾರ 26 ರಂದು ಮಹಫಿಲ್ ಎ ಖುಲ್ ದರ್ಗಾದ ಝೀಯಾರತ್ (ದರ್ಶನ) ಕಾರ್ಯಕ್ರಮ ನಡೆಯಲಿದೆ ಎಂದು ದರ್ಗಾದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ
ಪ್ರತಿ ವರ್ಷದದಂತೆ ಈ ವರ್ಷವು 23ರ ಸಂಜೆ 7.30 ಕ್ಕೆ ದರ್ಗಾದ ಖಾಜಾ ಬಜಾರನಲ್ಲಿ, ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದ್ದು, ದೇಶ, ವಿದೇಶದಿಂದ ಹಾಗೂ ರಾಜ್ಯದ ಮೂಲೆ ಮೂಲೆಯಿಂದ ಆಗಮಿಸುವ ಅಪಾರ ಭಕ್ತಾದಿಗಳಿಗೆ ದರ್ಗಾ ಕಮಿಟಿ ಮತ್ತು ಜಿಲ್ಲಾಡಳಿತದ ವತಿಯಿಂದ ಸಂಪೂರ್ಣ ವ್ಯವಸ್ಥೆ ಮಾಡಲಾಗಿದೆ ಎಂದು ಪೀಠಾಧಿಪತಿಗಳು ತಿಳಿಸಿದ್ದಾರೆ