ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಟರ್ಮಿನಲ್-2

ಬೆಂಗಳೂರು, ನ.೧೨- ದೇಶದ ಎರಡನೇಯ ಅತಿ ದೊಡ್ಡ ಟರ್ಮಿನಲ್ ಖ್ಯಾತಿಗೆ ಪಾತ್ರರಾಗಿರುವ ಬೆಂಗಳೂರಿನ ’ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ’ದ ಎರಡನೇ ಟರ್ಮಿನಲ್ ಅತ್ಯಾಧುನಿಕ ವಿನ್ಯಾಸ, ಹಚ್ಚಹಸಿರಿನ ವಾತಾವರಣ ಸೌಂದರ್ಯದಿಂದ ಪ್ರಯಾಣಿಕರ ಮನಸೊರೆಗೊಂಡಿದ್ದು, ಮುಂದಿನ ಡಿಸೆಂಬರ್‌ನಲ್ಲಿ ಪ್ರಯಾಣಕ್ಕೆ ಮುಕ್ತವಾಗಲಿದೆ.
ನಿನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಟರ್ಮಿನಲ್ ಉದ್ಘಾಟಿಸಿದ್ದು, ಬರೋಬ್ಬರಿ ೨.೫೫ ಲಕ್ಷ ಚದರ ಮೀಟರ್ ವಿಸ್ತೀರ್ಣದಲ್ಲಿ ೧೩,೦೦೦ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸದ್ಯ ಈ ನೂತನ ಟರ್ಮಿ ನಲ್ ವಾರ್ಷಿಕ ೨.೫ ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ಸಾಮರ್ಥ್ಯ ಮಾತ್ರವಲ್ಲದೆ ಒಮ್ಮೆಗೆ ೬೦೦೦೫೨ ಪ್ರಯಾಣಿಕರು ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ.
ಟರ್ಮಿನಲ್-೨ ಬೆಂಗಳೂರಿನ ಉದ್ಯಾನಗಳ ಮಾದರಿಯಲ್ಲಿ ಸಿದ್ದಪಡಿಸಿದ್ದು, ‘ಹೈಟೆಕ್ ಜತೆ ಹಚ್ಚ ಹಸಿರಿನ ಪರಿಸರ’ ನೋಡುಗರ ಗಮನ ಸೆಳೆಯುತ್ತಿದೆ. ಇಲ್ಲಿ ಲಕ್ಷಾಂತರ ಬೊಂಬುಗಳನ್ನು ಆಕರ್ಷಕ ಒಳಾಂಗಣ ವಿನ್ಯಾಸ ಮಾಡಲಾಗಿದೆ. ಹಚ್ಚ ಹಸಿರಿನ ಹೊದಿಕೆ ಇದೆ.
ಗಿಡಗಳು, ಚಿಕ್ಕ ಕುಂಡದಲ್ಲಿ ಸ್ಥಳೀಯ ಸಸ್ಯ ಪ್ರಭೇದಗಳನ್ನು ಹಾಕಲಾಗಿದೆ. ಸೂರ್ಯನೆ ಬೆಳಕು ನೇರವಾಗಿ ಟರ್ಮಿನಲ್ ಒಳಗೆ ಬೀಳುವಂತೆ ವಿನ್ಯಾಸ ಮಾಡಲಾಗಿದೆ. ಪ್ರವೇಶಿಸಿದರೆ ಉದ್ಯಾನಕ್ಕೆ ಅನುಭವವಾಗುತ್ತದೆ. ಡಿಜಿಟಲ್ ಸ್ನೇಹಿ ಅಂಶಗಳು, ಮೊದಲ ಸಂಪರ್ಕ, ಹೋಟೆಲ್, ಬಹುಹಂತದ ಪಾರ್ಕಿಂಗ್ ಒಳಗೊಂಡಿದೆ.
ಇಲ್ಲಿನ ಒಳನೋಟ ವಿನ್ಯಾಸವು ಪ್ರಯಾಣಿಕರಿಗೆ ವಿಶಿಷ್ಟ ಅನುಭವ ನೀಡಲಿದೆ. ೯೦ ಕೌಂಟರ್‌ಗಳನ್ನು ಹೊಂದಿರುವ ಟಿ-೨ ವೇಗದ ಚೆಕ್-ಇನ್‌ಗಳು ಮತ್ತು ಸೆಕ್ಯುರಿಟಿ ಚೆಕ್ ಪ್ರದೇಶಗಳಿಂದ ಸುಲಭವಾಗಿ ಮುನ್ನಡೆಯಲು ಸಾಧ್ಯವಾಗಿದೆ.
ಎರಡು ಹಂತದ ಡೊಮೆಸ್ಟಿಕ್ ಮತ್ತು ಇಂಟರ್‌ನ್ಯಾಷನಲ್ ರೀಟೇಲ್ ಮತ್ತು ಲೌಂಜ್ ಪ್ರದೇಶಗಳನ್ನು ಕಟ್ಟಡದ ಒಳಗಡೆ ಮತ್ತು ಹೊರಗಡೆ ಆಕರ್ಷಕ ಹಸಿರಿನ ನೋಟ ದೊರೆಯುವಂತೆ ಮಾಡಲಾಗಿದೆ. ಎಲ್-ಆಕಾರದ ಪಿಯರ್‌ಗಳು ೧೯ ಬೋರ್ಡಿಂಗ್ ಗೇಟ್‌ಗಳಿಗೆ ಅವಕಾಶ ನೀಡುತ್ತವೆ(ಕೋಡ್ ಸಿ ಸಮಾನ ವಿಮಾನ).
ಅವುಗಳನ್ನು ತಳ್ಳಿ ಮುಖ್ಯ ಸಂಕೀರ್ಣಕ್ಕೆ ಬರಲು ಸಾಕಷ್ಟು ಚಲಿಸುವ ಸ್ಥಳಾವಕಾಶ ನೀಡಲಾಗಿದೆ. ಟರ್ಮಿನಲ್‌ನ ಒಳಾಂಗಣಗಳು ಬಿದಿರಿನಿಂದ ಸ್ಫೂರ್ತಿ ಪಡೆದ ಸಾಂಪ್ರದಾಯಿಕ ಬಿದಿರಿನ ನೇಯ್ಗೆ ಹೊಂದಿವೆ ಮತ್ತು ಇದು ಟರ್ಮಿನಲ್‌ಗೆ ಸಮಕಾಲೀನ ಆದರೆ ಕ್ಲಾಸಿಕ್ ನೋಟ ಮತ್ತು ಭಾವನೆ ಮೂಡಿಸುತ್ತದೆ.
ಇನ್ನೂ, ಇಲ್ಲಿನ ಕಲಾಕೃತಿಗಳು ಕರ್ನಾಟಕದ ಪರಂಪರೆ ಮತ್ತು ಸಂಸ್ಕೃತಿಯನ್ನು ಹಾಗೂ ಭಾರತದ ತತ್ವಗಳ ಆಕರ್ಷಕವಾಗಿದೆ. ೪೩ ಕಲಾವಿದರ ೯೦ ಕಲಾಕೃತಿಗಳನ್ನು ಆಯ್ಕೆ ಮಾಡಲಾಗಿದೆ.
ಮತ್ತೊಂದೆಡೆ ಟರ್ಮಿನಲ್ ಸುತ್ತಲೂ ೧೦,೨೩೫ ಚದರ ಅಡಿಗಳಷ್ಟು ಹಸಿರು ಗೋಡೆಗಳಿಂದ, ಕಂಚಿನ ಪರದೆಗಳ ಮೂಲಕ ಟರ್ಮಿನಲ್‌ನ ಮೇಲ್ಛಾವಣಿ ಯಿಂದ ಇಳಿದುಬಿದ್ದ ತೂಗಾಡುವ ಆಕರ್ಷಕ ವಿನ್ಯಾನಸವೂ ನೋಡಗರ ಗಮನ ಸೆಳೆದಿದೆ.
ಒಟ್ಟಿನಲ್ಲಿ ಉದ್ಯಾನ ನಗರಿಯ ಸೌಂದರ್ಯ ಹಾಗೂ ಕರ್ನಾಟಕದ ಸಂಸ್ಕೃತಿಯ ಅನುಭವ ನೀಡುವ ವಾಕ್ ಇನ್ ದಿ ಗಾರ್ಡನ್ ಎಂಬ ಹೆಸರಿನ ಟರ್ಮಿನಲ್-೨ ನಿರ್ಮಾಣ ವಾಗಿದ್ದು, ರಾಜ್ಯದ ರಾಜಧಾನಿ ದೆಹಲಿ ಬಿಟ್ಟರೆ, ಬೆಂಗಳೂರೇ ಅತಿ ದೊಡ್ಡ ವಿಮಾನ ನಿಲ್ದಾಣ ಹೊಂದಿದಂತಾಗಿದೆ. ಅಷ್ಟೇ ಅಲ್ಲ ಟರ್ಮಿನಲ್ -೨ ಸಿಂಗಾಪುರ ವಿಮಾನ ನಿಲ್ದಾಣದ ಮಾದರಿಯಲ್ಲಿದೆ ಎಂಬುದು ಮತ್ತೊಂದು ವಿಶೇಷವಾಗಿದೆ.

ಎಷ್ಟು ಕೋಟಿ ವೆಚ್ಚ…!
ವಿಮಾನ ನಿಲ್ದಾಣದ ೨ನೇ ಟರ್ಮಿನಲ್ ಎರಡು ಹಂತಗಳಲ್ಲಿ ನಿರ್ಮಿಸಲಾಗುತ್ತಿದೆ. ಮೊದಲ ಹಂತವನ್ನು ೧೩ ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.