ಹಗ್ಗ ಜಗ್ಗಾಟಕ್ಕೆ ಇಂದು ತೆರೆ

ಬೆಂಗಳೂರು,ಮೇ೧೬:ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ಕಾಂಗ್ರೆಸ್ ಹೈಕಮಾಂಡ್ ಇಂದು ತೀರ್ಮಾನಿಸಲಿದ್ದು, ರಾತ್ರಿ ವೇಳೆಗೆ ನೂತನ ಸಿಎಂ ಹೆಸರು ಫೈನಲ್ ಆಗಲಿದೆ.ನೂತನ ಸಿಎಂ ಆಯ್ಕೆಯ ಕಗ್ಗಂಟನ್ನು ಬಿಡಿಸಲು ಹೈಕಮಾಂಡ್ ತನ್ನದೇ ಆದ ಸೂತ್ರಗಳನ್ನು ಸಿದ್ಧಪಡಿಸಿಕೊಂಡಿದ್ದು, ಸಿದ್ದರಾಮಯ್ಯ ಮತ್ತು ಡಿಕೆಶಿ ಮುಂದೆ ಈ ಸೂತ್ರಗಳನ್ನಿಟ್ಟು ಅವರ ಮನವೊಲಿಸಿ ನೂತನ ಮುಖ್ಯಮಂತ್ರಿಯ ಹೆಸರನ್ನು ಇಂದು ರಾತ್ರಿ ವೇಳೆಗೆ ಪ್ರಕಟಿಸುವುದು ಬಹುತೇಕ ಖಚಿತ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ಹೇಳಿವೆ.ಅನಾರೋಗ್ಯದ ಕಾರಣ ನಿನ್ನೆ ದೆಹಲಿ ಭೇಟಿಯನ್ನು ರದ್ದುಗೊಳಿಸಿ ಬೆಂಗಳೂರಿನಲ್ಲೇ ಉಳಿದಿದ್ದ ಡಿ.ಕೆ. ಶಿವಕುಮಾರ್ ಉಳಿದಿದ್ದರಿಂದ ನಿನ್ನೆ ನೂತನ ಸಿಎಂ ಆಯ್ಕೆಯ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ನಡೆಯಬೇಕಿದ್ದ ಸಭೆ ರದ್ದಾಗಿತ್ತು. ನಿನ್ನೆ ದೆಹಲಿಗೆ ಹೋಗದ ಡಿ.ಕೆ. ಶಿವಕುಮಾರ್, ಇಂದು ವರಿಷ್ಠರ ಬುಲಾವ್ ಮೇರೆಗೆ ಬೆಂಗಳೂರಿನಿಂದ ದೆಹಲಿಗೆ ತೆರಳಿದರು. ಸಿದ್ದರಾಮಯ್ಯ ನಿನ್ನೆಯೇ ದೆಹಲಿಗೆ ತೆರಳಿದ್ದಾರೆ. ಹಾಗಾಗಿ, ನಿನ್ನೆ ರದ್ದಾಗಿದ್ದ ನೂತನ ಸಿಎಂ ಆಯ್ಕೆಯ ಸಭೆ ಇಂದು ಸಂಜೆ ದೆಹಲಿಯಲ್ಲಿ ನಡೆಯಲಿದೆ.
ಕಾಂಗ್ರೆಸ್‌ನ ಅಧಿನಾಯಕಿ ಸೋನಿಯಾಗಾಂಧಿ ಅವರು ಶಿಮ್ಲಾ ಪ್ರವಾಸದಲ್ಲಿದ್ದು, ಇಂದು ಮಧ್ಯಾಹ್ನ ದೆಹಲಿಗೆ ಹಿಂದಿರುಗಲಿದ್ದು, ಅವರು ದೆಹಲಿಗೆ ಬಂದ ನಂತರ ಎಐಸಿಸಿ ಅಧ್ಯಕ್ಷರ ನಿವಾಸದಲ್ಲಿ ನೂತನ ಸಿಎಂ ಆಯ್ಕೆಯ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ನೂತನ ಸಿಎಂ ಯಾರು ಎಂಬುದು ಅಂತಿಮಗೊಳ್ಳಲಿದೆ.
ಮುಖ್ಯಮಂತ್ರಿ ಆಯ್ಕೆಯನ್ನು ವಿಳಂಬ ಮಾಡಿದರೆ ಪಕ್ಷದ ವರ್ಚಸ್ಸಿಗೆ ಹಾನಿಯಾಗಹುದು. ಅದಕ್ಕೆ ಅವಕಾಶ ಕೊಡದೆ ಆದಷ್ಟು ಇಂದೇ ಅಂತಿಮ ತೀರ್ಮಾನವನ್ನು ಕೈಗೊಳ್ಳಲು ಹೈಕಮಾಂಡ್ ನಿರ್ಧರಿಸಿದೆ. ಅದರಂತೆ ಇಂದು ನೂತನ ಸಿಎಂ ಹೆಸರು ಬಹುತೇಕ ಪ್ರಕಟವಾಗಲಿದೆ.
ಬಿಕ್ಕಟ್ಟು ಪರಿಹಾರಕ್ಕೆ ಹೈಕಮಾಂಡ್ ಸೂತ್ರ
ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಪಟ್ಟು ಹಿಡಿದಿದ್ದಾರೆ. ನಿನ್ನೆ ಸಂಸದ ಡಿ.ಕೆ. ಸುರೇಶ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಡಿ.ಕೆ. ಶಿವಕುಮಾರ್ ಅವರನ್ನೇ ಸಿಎಂ ಮಾಡುವಂತೆ ಒತ್ತಡ ಹೇರಿದ್ದಾರೆ. ಇದಕ್ಕೆ ಪ್ರತಿಯಾಗಿ ದೆಹಲಿಯಲ್ಲಿರುವ ಸಿದ್ದರಾಮಯ್ಯ ಹಾಗೂ ಅವರ ಪರ ಶಾಸಕರು ಸಿದ್ದರಾಮಯ್ಯರವರನ್ನು ಸಿಎಂ ಮಾಡುವಂತೆ ಒತ್ತಡ ಹಾಕಿದ್ದಾರೆ. ಇದು ಹೈಕಮಾಂಡ್‌ನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು, ಸಿದ್ದರಾಮಯ್ಯ ಮತ್ತು ಡಿ.ಕೆ ಶಿವಕುಮಾರ್ ಇಬ್ಬರಿಗೂ ಸರ್ವಸಮ್ಮತವಾದ ಸೂತ್ರವನ್ನು ಹೈಕಮಾಂಡ್ ಸಿದ್ಧಪಡಿಸಿಕೊಂಡಿದೆ. ಮುಖ್ಯಮಂತ್ರಿ ಅಧಿಕಾರವನ್ನು ೫೦:೫೦ ರಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್‌ರವರಿಗೆ ಹಂಚಿಕೆ ಮಾಡುವುದು ಪ್ರಮುಖ ಸೂತ್ರವಾಗಿದೆ.
ಈ ಸೂತ್ರಕ್ಕೆ ಇಬ್ಬರನ್ನು ಒಪ್ಪಿಸಿ ಮುಖ್ಯಮಂತ್ರಿ ಆಯ್ಕೆಯನ್ನು ಸುಗಮಗೊಳಿಸುವ ಪ್ರಯತ್ನವನ್ನು ವರಿಷ್ಠರು ನಡೆಸಲಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯ ಮತ್ತು ಡಿಕೆಶಿ ಇಬ್ಬರು ಈ ಸೂತ್ರಕ್ಕೆ ಒಪ್ಪದಿದ್ದರೆ ಹೈಕಮಾಂಡ್ ತನ್ನದೇ ಆದ ತೀರ್ಮಾನವನ್ನು ಪ್ರಕಟಿಸುವ ಸಾಧ್ಯತೆಗಳಿದ್ದು, ಆಗ ಸಿದ್ದರಾಮಯ್ಯ-ಡಿಕೆಶಿ ಬಿಟ್ಟು ೩ನೇ ವ್ಯಕ್ತಿ ಸಿಎಂ ಆದರೂ ಅಚ್ಚರಿ ಇಲ್ಲ ಎಂದು ಹೇಳಲಾಗಿದೆ.
ಬ್ಯಾಲೆಟ್ ಬಾಕ್ಸ್ ಇಂದು ಓಪನ್
ಭಾನುವಾರ ಬೆಂಗಳೂರಿನಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಬ್ಯಾಲೆಟ್ ಮೂಲಕ ಶಾಸಕರ ಅಭಿಪ್ರಾಯ ಸಂಗ್ರಹಿಸಲಾಗಿದ್ದು, ಈ ಬ್ಯಾಲೆಟ್ ಬಾಕ್ಸನ್ನು ವೀಕ್ಷಕರಾದ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಸುಶೀಲ್‌ಕುಮಾರ್ ಶಿಂಧೆ ನಿನ್ನೆ ಎಐಸಿಸಿ ಅಧ್ಯಕ್ಷರಿಗೆ ಬ್ಯಾಲೆಟ್ ಬಾಕ್ಸ್ ಸಮೇತ ವರದಿಯನ್ನು ತಿಳಿಸಿದ್ದಾರೆ.ಈ ಬ್ಯಾಲೆಟ್ ಬಾಕ್ಸನ್ನು ಇಂದು ಸೋನಿಯಾಗಾಂಧಿ ನೇತೃತ್ವದಲ್ಲಿ ನಡೆಯುವ ಸಭೆಯಲ್ಲಿ ತೆರೆಯಲಾಗುತ್ತದೆ. ಶಾಸಕರ ಅಭಿಪ್ರಾಯ ಏನಿದೆ ಎಂಬುದನ್ನೂ ಸಿದ್ದರಾಮಯ್ಯ-ಡಿಕೆಶಿಗೆ ತಿಳಿಸಿ ಅಂತಿಮವಾಗಿ ಕಾಂಗ್ರೆಸ್ ಹೈಕಮಾಂಡ್ ಒಂದು ನಿರ್ಧಾರಕ್ಕೆ ಬರುತ್ತದೆ ಎಂದು ಹೇಳಲಾಗಿದೆ.