ಹಗರಿ ನದಿ ಪ್ರವಾಹ: ಯಾಳ್ಪಿ ಕಗ್ಗಲ್ ಬಳಿ 24 ಜನರ ರಕ್ಷಣೆ


ಬಳ್ಳಾರಿ,ಆ.03: ಬಳ್ಳಾರಿ ತಾಲೂಕಿನ ಯಾಳ್ಪಿ ಕಗ್ಗಲ್ ಬಳಿ ಹೂವುಗಳನ್ನು ಹರಿಯಲು ಹೋಗಿ ಹಗರಿ ನದಿಯಲ್ಲಿ ಪ್ರವಾಹ ಹೆಚ್ಚಳವಾದ ಹಿನ್ನೆಲೆ ಸಿಕ್ಕಿಹಾಕಿಕೊಂಡಿದ್ದ 24 ಜನರನ್ನು ಬಳ್ಳಾರಿ ಜಿಲ್ಲಾಡಳಿತ ಮತ್ತು ಅಗ್ನಿಶಾಮಕ ದಳದ ತಂಡಗಳು ವಿಶೇಷ ಕಾರ್ಯಾಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ.
ಯಾಳ್ಪಿ ಕಗ್ಗಲ್‍ನ 24 ಜನರು ನಿತ್ಯದಂತೆ ಯಥಾರೀತಿ ಹೂವುಗಳನ್ನು ಹರಿಯಲು ತೆರಳಿದ್ದರು;ಹಗರಿ ನದಿಯಲ್ಲಿ ಪ್ರವಾಹ ಹೆಚ್ಚಳವಾದ ಹಿನ್ನೆಲೆ ಆ ಕಡೆಯ ಸಿಕ್ಕಿಹಾಕಿಕೊಂಡಿದ್ದರು.
ಮಾಹಿತಿ ಅರಿಯುತ್ತಲೇ ಅಗ್ನಿಶಾಮಕ ದಳದ ವಿಶೇಷ ತಂಡದ ಜೊತೆಗೆ ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಡಾ.ಆಕಾಶ ಮತ್ತು ಬಳ್ಳಾರಿ ತಹಸೀಲ್ದಾರ್ ವಿಶ್ವನಾಥ ಅವರು 24 ಜನರನ್ನು ಸುರಕ್ಷಿತವಾಗಿ ಮರಳಿ ರಕ್ಷಿಸಿದ್ದಾರೆ.
ಅದೇ ರೀತಿಯಲ್ಲಿ ಮೋಕಾ, ಗೋಡೆಹಾಳ್, ಸಂಗನಕಲ್ಲು, ಪರಮದೇವನಹಳ್ಳಿ ಸೇರಿದಂತೆ ವಿವಿಧೆಡೆ ಮಳೆಯಿಂದ ಹಾನಿಗೊಳಗಾದ ಮತ್ತು ಮಳೆನೀರು ನುಗ್ಗಿ ಸಮಸ್ಯೆಯಾದ ಸ್ಥಳಗಳಿಗೆ ಸಹಾಯಕ ಆಯುಕ್ತ ಡಾ.ಆಕಾಶ ಮತ್ತು ಬಳ್ಳಾರಿ ತಹಸೀಲ್ದಾರ್ ವಿಶ್ವನಾಥ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜನರ ಅಹವಾಲುಗಳನ್ನು ಆಲಿಸಿ ಪರಿಹಾರ ವಿತರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಗೂ ಗ್ರಾಮಸ್ಥರು ಇದ್ದರು.