ಹಗರಿ ತೀರದಲ್ಲಿ ಅಕ್ರಮ ಮರಳು ಗಣಿಗಾರಿಕೆ

 • ರಾತ್ರಿವೇಳೆ ಸಾಗಾಣೆ
 • ಹಗಲು ವೇಳೆ ಕ್ರೋಢಿಕರಣ
 • ರಾಜಕೀಯ ನಾಯಕರ ಕುಮ್ಮಕ್ಕು
 • ಅಧಿಕಾರಿಗಳ ನಿರ್ಲಕ್ಷ್ಯ
  ಎನ್.ವೀರಭದ್ರಗೌಡ

  ಬಳ್ಳಾರಿ, ಜೂ.03: ಅಕ್ರಮ ಗಣಿಗಾರಿಕೆ ಎಂಬ ಹಣೆಪಟ್ಟಿಯಿಂದ ಹೊರಬರಲು ಬಳ್ಳಾರಿ ಜನ ಸಿದ್ದರಿಲ್ಲ. ಹಗರಿ ನದಿಯಿಂದ ದಿನಾಲು ರಾತ್ರಿ ಈಗ ಅಕ್ರಮ ಮರಳು ಗಣಿಗಾರಿಕೆ ಎಗ್ಗಿಲ್ಲದೆ ಸಾಗಿದ್ದರೂ ಸಂಬಂಧಿಸಿದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಮಾತ್ರ ಕಣ್ಣು ಮತ್ತು ಬಾಯಿ ಎರಡೂ ಮುಚ್ಚಿಕೊಂಡಂತೆ ಕಾಣುತ್ತಿದೆ. ಇದಕ್ಕೆ ರಾಜಕೀಯ ನಾಯಕರ ಕುಮ್ಮಕ್ಕು ಸಹ ಇದೆ ಎನ್ನಲಾಗುತ್ತಿದೆ.
  ತಾಲೂಕಿನ ಮೋಕಾ, ಬಿ.ಡಿ.ಹಳ್ಳಿ, ಮತ್ತು ಬೆಣಕಲ್ಲು ಗ್ರಾಮದ ಬಳಿಯ ಹಗರಿ ನದಿಯಿಂದ ಈ ಅಕ್ರಮ ದಂಧೆ ನಡೆದಿದೆ. ರಾತ್ರಿವೇಳೆ ಬರುವ ಲಾರಿಗಳಿಗೆ ಜೆಸಿಬಿಯಿಂದ ಮರಳನ್ನು ತುಂಬಿ ಸಾಗಿಸುವ ರೀತಿ ಒಂದು ಕಡೆಯಾದರೆ ಮತ್ತೊಂದು ಕಡೆ ಎತ್ತಿನಬಂಡಿಯಲ್ಲಿ ಹಗಲಿನ ವೇಳೆ ಸಾಗಾಣೆ ಮಾಡಿ ಒಂದು ಕಡೆ ಸಂಗ್ರಹಿಸಿ ನಂತರ ಅದನ್ನು ಲಾರಿಗಳಿಗೆ ತುಂಬಿ ಸಾಗಿಸುವುದು ಮತ್ತೊಂದು ರೀತಿ ನಡೆದಿದೆ.
  ಈ ಹಳ್ಳಿಗಳ ಕಡೆ ಹಗರಿ ನದಿ ತೀರದ ರಸ್ತೆಗಳಲ್ಲಿ ಸಾಗಿದರೆ, ಅಲ್ಲಲ್ಲಿ ಮರಳಿನ ಕುಪ್ಪೆ ಹಾಕಿರುವುದು ಕಂಡು ಬರುತ್ತಿದೆ.


ಇಂತಹ ಕುಪ್ಪೆಗಳನ್ನು ರಾತ್ರಿ ವೇಳೆ ಅಕ್ರಮವಾಗಿ ನಗರಕ್ಕೆ ಸಾಗಾಣೆ ಮಾಡಲಾಗುತ್ತಿದೆ.
ಸಂಜೆವಾಣಿಗೆ ದೊರೆತ ವೀಡಿಯೋ ಮತ್ತು ಛಾಯಾಚಿತ್ರಗಳ ಮಾಹಿತಿ ಪ್ರಕಾರ ಕೆ.ಎ 37-ಎ 8443 ಜೆಸಿಬಿ ಯಂತ್ರವು, ಕೆ.ಎ 35-ಸಿ 4532, ಕೆ.ಎ 34-ಬಿ 3228, ಅಲ್ಲದೆ ನಂಬರ್ ಪ್ಲೇಟ್ ಸರಿಯಾಗಿ ಕಾಣದೇ ಇರುವ ಅನೇಕ ಲಾರಿಗಳು ರಾತ್ರಿವೇಳೆ ಅಕ್ರಮವಾಗಿ ಮರಳು ಸಾಗಿಸಿವೆ.
ಸದ್ಯ ಬಳ್ಳಾರಿ ತಾಲೂಕಿನಲ್ಲಿ ಹರಿಯುವ ಹಗರಿ ನದಿ ಪ್ರದೇಶದಲ್ಲಿ ಮರಳಿನ ಗಣಿಗಾರಿಕೆ ನಡೆಸಲು ಯಾರಿಗೂ ಗುತ್ತಿಗೆ ನೀಡಿಲ್ಲ. ಆದ್ದರಿಂದ ನಗರಕ್ಕೆ ಈಗ ಸಿರುಗುಪ್ಪ ಬಳಿ ತುಂಗಭದ್ರ ನದಿಯಿಂದ ನಗರಕ್ಕೆ ಮರಳು ಸಾಗಾಟ ನಡೆದಿರುವುದರಿಂದ ಲಾರಿ ಬಾಡಿಗೆ ಹೆಚ್ಚಾಗಿ ಮರಳು ಧರ ಹೆಚ್ಚಿರುವುದರಿಂದ ಸ್ಥಳೀಯವಾಗಿ ಈ ರೀತಿ ಅಕ್ರಮವಾಗಿ ಸಾಗಾಣೆ ಮಾಡಿ ಒಂದಿಷ್ಟು ಕಡಿಮೆ ಧರಕ್ಕೆ ನೀಡುತ್ತಿದ್ದಾರೆ. ‌


ಇದರಿಂದ ಸರ್ಕಾರದ ಬೋಕಸಕ್ಕೆ ನಷ್ಟ ಮತ್ತು ಅಕ್ರಮ ದಂಧೆಯಾದರೂ ಈ ಬಗ್ಗೆ ಅಧಿಕಾರಿಗಳು ಏಕೆ ಮೌನ ಎಂಬುದು ಅರ್ಥವಾಗುತ್ತಿಲ್ಲ. ಬಲ್ಲ ಮೂಲಗಳ ಪ್ರಕಾರ ಆಡಳಿತಾರೂಢ ಪಕ್ಷದ ಮುಖಂಡರ ಕುಮ್ಮಕ್ಕಿನಿಂದ ಈ ದಂಧೆ ನಡೆಯುತ್ತಿದೆ ಎನ್ನಲಾಗುತ್ತಿದೆ.
ಯಾರ ಭಯವಿಲ್ಲದಂತೆ ರಾತ್ರಿ ವೇಳೆ ಹತ್ತಾರು ಲಾರಿಗಳ ಮೂಲಕ ಆರಂಭಗೊಂಡಿರುವ ಈ ಅಕ್ರಮ ದಂಧೆಗೆ ಕಡಿವಾಣ ಹಾಕದಿದ್ದರೆ ಕೆಲ ದಿನಗಳಲ್ಲಿಯೇ ನೂರಾರು ಲಾರಿಗಳ ಮೂಲಕವೂ ನಡೆಯುವ ಸಾಧ್ಯತೆ ಇದೆ.