ಹಗರನೂರು ಗ್ರಾ.ಪಂ. ‘ಸ್ವಚ್ಛ ಸಂಕೀರ್ಣ’ ಉದ್ಘಾಟನೆ ನೈರ್ಮಲ್ಯ ಕಾಳಜಿ ಅಂತರಂಗದಲ್ಲಿ ಮೂಡಲಿ

ಹೂವಿನಹಡಗಲಿ:ಅ.30. ಪ್ರತಿ ಹಳ್ಳಿಯನ್ನು ತ್ಯಾಜ್ಯಮುಕ್ತಗೊಳಿಸಲು ಸರ್ಕಾರ ಉತ್ತಮ ಯೋಜನೆಯನ್ನು ಜಾರಿಗೊಳಿದೆ. ಜನರ ಅಂತರಂಗದಲ್ಲಿ ನೈರ್ಮಲ್ಯ ಕಾಳಜಿ ಮೂಡಿದಾಗ ಸ್ವಚ್ಛಗ್ರಾಮ ಪರಿಕಲ್ಪನೆ ಸಾಕಾರಗೊಳ್ಳುತ್ತದೆ ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಆರ್.ನಂದಿನಿ ಹೇಳಿದರು.
ತಾಲೂಕಿನ ಹಗರನೂರು ಗ್ರಾಮ ಪಂಚಾಯಿತಿ ಹಮ್ಮಿಕೊಂಡಿದ್ದ ಸ್ವಚ್ಛೋತ್ಸವ ನಿತ್ಯೋತ್ಸವ ಮಾಸಾಚರಣೆಗೆ ಚಾಲನೆ ನೀಡಿ ಮಾತನಾಡಿದ ಅವರು, ಪಟ್ಟಣ ಮಾದರಿಯಲ್ಲಿ ಹಳ್ಳಿಗಳಲ್ಲೂ ಘನ, ದ್ರವ ತ್ಯಾಜ್ಯ ನಿರ್ವಹಣೆಗಾಗಿ ‘ಸ್ವಚ್ಛ ಸಂಕೀರ್ಣ’ ಘಟಕಗಳನ್ನು ಪ್ರತಿ ಪಂಚಾಯಿತಿಯಲ್ಲಿ ತೆರೆಯಲಾಗುತ್ತಿದೆ. ಮನೆ ಮನೆಯಿಂದ ಸಂಗ್ರಹವಾಗುವ ಹಸಿ ಮತ್ತು ಒಣ ತ್ಯಾಜ್ಯವನ್ನು ಘಟಕದಲ್ಲಿ ವಿಂಗಡಿಸಿ, ಕಸದಿಂದ ರಸ ತೆರೆಯುವ ಪ್ರಕ್ರಿಯೆ ನಡೆಯಲಿದೆ. ಇದರ ಹೊಣೆಯನ್ನು ಮಹಿಳಾ ಸ್ವ ಸಹಾಯ ಸಂಘಗಳಿಗೆ ವಹಿಸಲಾಗಿದೆ ಎಂದು ತಿಳಿಸಿದರು.
ಶೌಚಾಲಯ, ಬಚ್ಚಲು ನೀರಿನ ಇಂಗು ಗುಂಡಿಗಳನ್ನು ನಿರ್ಮಿಸಿಕೊಂಡರೆ ಸಾಲದು. ಯೋಜನೆಯ ಆಶಯಕ್ಕೆ ಪೂರಕವಾಗಿ ಅವುಗಳನ್ನು ಬಳಸಬೇಕು. ಕೆಟ್ಟ ತ್ಯಾಜ್ಯ ಪರಿಸರಕ್ಕೆ ಸೇರದಂತೆ ಎಚ್ಚರ ವಹಿಸಬೇಕು. ಇಂತಹ ಮಹತ್ವಪೂರ್ಣ ಯೋಜನೆಗಳು ಯಶಸ್ವಿಯಾಗಬೇಕಾದರೆ ಜನರ ಸಹಭಾಗಿತ್ವ ಅವಶ್ಯವಿದೆ ಎಂದು ಹೇಳಿದರು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಯು.ಹೆಚ್.ಸೋಮಶೇಖರ, ಪಂಚಾಯತ್ ರಾಜ್ ಎಂಜಿನಿಯರಿಂಗ್ ಉಪ ವಿಭಾಗದ ಎಇಇ ಡಿ.ಜಯರಾಂ ನಾಯ್ಕ, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ವೀರಣ್ಣನಾಯ್ಕ ಇದ್ದರು.