ಹಗರನೂರಿನಲ್ಲಿ ಮಳೆ : ಉರುಳಿಬಿದ್ದ ಮರ, ವಿದ್ಯುತ್ ಕಂಬ


ಸಂಜೆವಾಣಿ ವಾರ್ತೆ
ಹೂವಿನಹಡಗಲಿ, ಏ.19: ತಾಲೂಕಿನ ಹಗರನೂರು, ಮಾನ್ಯರಮಸಲವಾಡ ಸುತ್ತಮುತ್ತಲ ಗ್ರಾಮಗಳಲ್ಲಿ ನಿನ್ನೆ ಸಂಜೆ ಬಿರುಗಾಳಿ ಸಹಿತ ಮಳೆ ಸುರಿದಿದ್ದು, ಗಿಡಮರ, ವಿದ್ಯುತ್ ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ.
ಹಗರನೂರು ಗ್ರಾಮದ ಕೆರೆ ದಡದಲ್ಲಿರುವ ಆಂಜನೇಯ ದೇವಸ್ಥಾನದ ಗರುಡಗಂಭಕ್ಕೆ ಸಿಡಿಲು ಎರಗಿ ಕಂಬ ತುಂಡಾಗಿ ನೆಲಕ್ಕೆ ಬಿದ್ದಿದೆ. ಹಿರೇಹಡಗಲಿ, ಹಿರೇಕೊಳಚಿ, ಚಿಕ್ಕಕೊಳಚಿ, ಉಪನಾಯಕನಹಳ್ಳಿ ಇತರೆ ಗ್ರಾಮಗಳಲ್ಲಿ ಸಾಧಾರಣಾ ಮಳೆಯಾಗಿದೆ.
ಬಿರುಗಾಳಿ ಬೀಸಿದ್ದರಿಂದ ಮಸಲವಾಡ, ಹಗರನೂರು ಗ್ರಾಮಗಳಲ್ಲಿ ಗಿಡಮರಗಳು ಉರುಳಿ ಬಿದ್ದಿವೆ. ರಸ್ತೆ ಮಧ್ಯೆ ಜಾಲಿಮರ ಉರುಳಿ ಬಿದಿದ್ದರಿಂದ ಮಸಲವಾಡ-ಹಗರನೂರು ಮಾರ್ಗದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು. ಹಗರನೂರು ಗ್ರಾಮದಲ್ಲಿ ಮೂರು ಮನೆಗಳ ಮೇಲ್ಚಾವಣಿ ತಗಡುಗಳು ಹಾರಿ ಹೋಗಿವೆ. ಮಾನ್ಯರಮಸಲವಾಡದಲ್ಲಿ ದನದ ಕೊಟ್ಟಿಗೆ, ರೈತರ ಗೋದಾಮುಗಳ ಮೇಲ್ವಚಾವಣಿಗಳು ಗಾಳಿಗೆ ಹಾರಿ ಹೋಗಿವೆ. ರೈತರ ಕೃಷಿ ಪಂಪ್ ಸೆಟ್ ಗಳು ವಿದ್ಯುತ್ ಪರಿವರ್ತಕ, ಕಂಬಗಳು ನೆಲಕ್ಕೆ ಉರುಳಿ ಬಿದ್ದಿವೆ.