ಹಗರಣಗಳ ತನಿಖೆಗೆ ತಂಡ,ಪ್ರಿಯಾಂಕ್ ಇಂಗಿತ

ಬೆಂಗಳೂರು, ಜೂ. ೨೮- ಬಿಜೆಪಿ ಸರ್ಕಾರದ ಹಗರಣಗಳ ಬಗ್ಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಟ್ಟದ ತನಿಖಾ ತಂಡದ ಅವಶ್ಯಕತೆ ಇದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ ಖರ್ಗೆ ಹೇಳಿದರು.ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಬಹಳ ವಿಭಿನ್ನವಾಗಿ ಹಗರಣಗಳನ್ನು ಮಾಡಿದ್ದಾರೆ. ತಂತ್ರಜ್ಞಾನ ಬಳಸಿಕೊಂಡು ಹಗರಣಗಳನ್ನು ಮಾಡಲಾಗಿದೆ. ಹಾಗಾಗಿ ತಂತ್ರಜ್ಞಾನ ಅರಿತಿರುವ ಅಧಿಕಾರಿಗಳ ಮೂಲಕ ತನಿಖೆ ಅವಶ್ಯಕತೆ ಇದೆ ಎಂದರು.
ಬಿಟ್ ಕಾಯನ್ ಸೇರಿದಂತೆ ಆರ್ಥಿಕ ಹಗರಣಗಳು ಆಗಿವೆ. ಈ ವಿಚಾರದಲ್ಲಿ ನಮಗೆ ಸೈಬರ್ ತಜ್ಞರ ಅಗತ್ಯವಿದೆ. ಗಂಗಾಕಲ್ಯಾಣದಲ್ಲಿ ಇನ್‌ಕಮ್ ಟ್ಯಾಕ್ಸ್ ರಿಟನ್ ವಿಲೀನ ಮಾಡಿದ್ದಾರೆ. ಹಾಗಾಗಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತನಿಖಾ ತಂಡದ ಅವಶ್ಯಕತೆ ಇದೆ ಎಂದರು.
ಇಂದಿನ ಸಚಿವ ಸಂಪುಟದಲ್ಲಿ ಬಿಜೆಪಿಯ ಹಗರಣಗಳಿಗೆ ಎಸ್‌ಐಟಿ ತಂಡ ರಚನೆ ಮಾಡುವ ತೀರ್ಮಾನ ತೆಗೆದುಕೊಳ್ಳುವ ಅಗತ್ಯವಿಲ್ಲ. ಕಳೆದ ಸಚಿವ ಸಂಪುಟದಲ್ಲೇ ಈ ಬಗ್ಗೆ ಚರ್ಚೆ ಮಾಡಿ ಯಾವ ತಂಡ ರಚನೆ ಮಾಡಬೇಕು ಎಂಬ ಬಗ್ಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದರು.
ಕೆಲ ಹಗರಣಗಳ ತನಿಖೆಗೆ ಬೇರೆ ರೀತಿಯ ತಂಡಗಳನ್ನು ರಚನೆ ಮಾಡಬೇಕು. ಈ ಬಗ್ಗೆ ಎಲ್ಲವನ್ನೂ ಚರ್ಚಿಸಿದ್ದೇವೆ ಎಂದು ಅವರು ಹೇಳಿದರು.
ಬಿಜೆಪಿ ಅವಧಿಯ ಹಗರಣಗಳ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಅವರು ಸ್ಪಷ್ಟಪಡಿಸಿದರು.