ಹಕ್ಕು ಪತ್ರ ವಿತರಣೆ


ಮುಂಡಗೋಡ,ಜ.20: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಆಶೀರ್ವಾದಿಂದ ಹಕ್ಕು ಪತ್ರ ದೊರೆತಂತಾಗಿದೆ. ಪಕ್ಷ, ಜಾತಿ-ಭೇದ ಎನ್ನದೆ ಬಡಾವಣೆಯ ಪ್ರತಿಯೊಬ್ಬರಿಗೂ ಹಕ್ಕು ಪತ್ರ ನೀಡುತ್ತಿದ್ದೇವೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.
ಪಟ್ಟಣದ ಕಿಲ್ಲೆ ಓಣಿ ಹಾಗೂ ಹಳೂರ ಓಣಿಗಳ ಕೊಳಗೇರಿ ನಿವಾಸಿಗಳಿಗೆ ಸಾಂಕೇತಿಕವಾಗಿ ಅಧಿಕೃತ ಹಕ್ಕುಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.
10ಲಕ್ಷ ರೂ. ಬೆಲೆ ಬಾಳುವ ಆಸ್ತಿಯ ಹಕ್ಕುಪತ್ರ ನೀಡುತ್ತಿದ್ದೇವೆ. ಇನ್ನೂ ಮೂರು ಹಂತದಲ್ಲಿ ಹಕ್ಕುಪತ್ರ ನೀಡಲಾಗುವುದು. ಇದು ಸುಲಭದ ಕೆಲಸವಲ್ಲ. ಹಲವು ದಶಕಗಳಿಂದ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಕೊಳಗೇರಿ ನಿವಾಸಿಗಳಿಗೆ 4ನೇ ಹಂತದ ಅಧಿಕೃತ ಹಕ್ಕುಪತ್ರ ನೀಡಲಾಗುತ್ತಿದೆ ಎಂದರು.
ಜಿ.ಪಂ.ಮಾಜಿ ಸದಸ್ಯ ಎಲ್.ಟಿ.ಪಾಟೀಲ ಮಾತನಾಡಿ ಸುವರ್ಣಾಕ್ಷರದಲ್ಲಿ ಬರೆದಿಡುವ ದಿನ. ಹಕ್ಕುಪತ್ರ ಜ್ವಲಂತ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಇದೊಂದು ಯಶಸ್ವಿ ಯೋಜನೆ. ಬೈಪಾಸ್ ಮಾಡುವ ದೊಡ್ಡ ಯೊಜನೆ ಹೊಣೆ ಹೆಬ್ಬಾರ ಅವರ ಮೇಲಿದೆ. ಆ ಕೆಲಸ ಮಾಡಲು ನಿಮ್ಮ ಆಶೀರ್ವಾದ ಬೇಕು ಎಂದರು.
ಗುಡ್ಡಪ್ಪ ಕಾತೂರ ಮಾತನಾಡಿ ಈ ಹಿಂದೆ ಆಳ್ವಿಕೆ ಮಾಡಿದ ಸಚಿವ ಮತ್ತು ಶಾಸಕರಿಂದಲೂ ಆಗಿರಲಿಲ್ಲ. ಶಿವರಾಮ ಹೆಬ್ಬಾರ ಅವರು ಕೆಲಸದ ಒತ್ತಡದಲ್ಲಿದ್ದರೂ ಬಡವರ ಕೆಲಸ ಮಾಡುತ್ತಾರೆ. ಅವರ ಪ್ರಯತ್ನದಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗಿದೆ ಎಂದರು.
ಬಿ.ಶಂಭುಲಿಂಗ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಪ.ಪಂ.ಉಪಾಧ್ಯಕ್ಷ ಶ್ರೀಕಾಂತ ಸಾನು, ನಾಗಭೂಷಣ ಹಾವಣಗಿ, ಉಮೇಶ ಬಿಜಾಪುರ, ದೇವು ಪಾಟೀಲ, ಪ.ಪಂ.ಸದಸ್ಯರು, ಸಿಬ್ಬಂದಿ ಹಾಗೂ ಮುಂತಾದವರು ಉಪಸ್ಥಿತರಿದ್ದರು. ಜೂನಿಯರ್ ಕಾಲೇಜ್ ವಿದ್ಯಾರ್ಥಿಗಳು ನಾಡಗೀತೆ ಹೇಳಿದರು. ಪ.ಪಂ.ಸದಸ್ಯ ವಿಶ್ವನಾಥ ಪವಾಡಶೆಟ್ಟರ ಸ್ವಾಗತಿಸಿದರು. ಪ್ರದೀಪ ಹೆಗಡೆ ನಿರೂಪಿಸಿದರು.