ಹಕ್ಕು ಪತ್ರ ವಿತರಣೆಗೆ ಮನವಿ

ಹರಿಹರ.ನ.೯;ಬಗರ್ ಹುಕುಂ ಸಾಗುವಳಿದಾರರಿಗೆ ರಾಜ್ಯ ಸರಕಾರ ಕೂಡಲೆ ಹಕ್ಕುಪತ್ರ ವಿತರಣೆ ಮಾಡಬೇಕೆಂದು ಬಹುಜನ ಸಮಾಜ ಪಾರ್ಟಿ ರಾಜ್ಯ ಸಂಯೋಜಕ ಮಾರಸಂದ್ರ ಮುನಿಯಪ್ಪ ಆಗ್ರಹಿಸಿದರು.ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣದಲ್ಲಿ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ರಾಜ್ಯದೆಲ್ಲೆಡೆ ಶೋಷಿತರು, ಹಿಂದುಳಿದ, ಅಲ್ಪಸಂಖ್ಯಾತರು ಅಲ್ಪ ಪ್ರಮಾಣದ ಜಮೀನುಗಳನ್ನು ಸಾಗುವಳಿ ಮಾಡುತ್ತಿದ್ದಾರೆ.ಅವರಿಗೆ ಹಕ್ಕುಪತ್ರ ನೀಡಲು ಮೀನ, ಮೇಷ ಎಣಿಸಲಾಗುತ್ತಿದೆ. ಈ ಹಿಂದೆ ಕಾಗೋಡು ತಿಮ್ಮಪ್ಪರು ಸಚಿವರಿದ್ದಾಗ 1.50 ಲಕ್ಷ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿದರು. ಇನ್ನೂ 8.50 ಲಕ್ಷ ಜನ ಫಲಾನುಭವಿಗಳಿದ್ದಾರೆ. ಬಗರ್ ಹುಕುಂ ಸಮಿತಿಗಳನ್ನು ರಚಿಸಿ ಹಕ್ಕುಪತ್ರ ನೀಡುವ ಕೆಲಸವನ್ನು ಆರಂಭಿಸಬೇಕೆಂದರು.ಬಡವರು ಅಕ್ರಮವಾಗಿ ಸರಕಾರಿ ಜಾಗಗಳಲ್ಲಿ 10 ಲಕ್ಷ ಮನೆ ನಿರ್ಮಿಸಿಕೊಂಡಿದ್ದಾರೆ. ಈ ಪೈಕಿ 2.50 ಲಕ್ಷ ಜನರಿಗೆ ಹಕ್ಕುಪತ್ರ ನೀಡಿದ್ದು, ಇನ್ನೂ 7.50 ಜನರಿಗೆ ಹಕ್ಕುಪತ್ರ ನೀಡಬೇಕಿದೆ. ರಾಜ್ಯದ 33 ಸಾವಿರ ಗ್ರಾಮಗಳ ಪೈಕಿ 12500 ಗ್ರಾಮಗಳಲ್ಲಿ ದಲಿತರಿಗೆ ಸ್ಮಶಾನಗಳಿಲ್ಲ ಈ ಕುರಿತು ಸರಕಾರ ಗಮನ ಹರಿಸಬೇಕಿದೆ ಎಂದರು.

ಬೆಂಗಳೂರು ಸಮೀಪ ಹಸಿರು ವಲಯಕ್ಕಾಗಿ ಬಡವರ ಸಾವಿರಾರು ಎಕರೆ ಜಮೀನು ಹರಾಜಿಗಾಗಿ ಸರಕಾರ ಪ್ರಕಟಣೆ ಹೊರಡಿಸಿದೆ. ಈ ಜಮೀನನ್ನು ನಂಬಿ ಬದುಕುತ್ತಿರುವವರಿಗೆ ಇದು ಆಘಾತಕಾರಿ, ಅವರು ಬೀದಿ ಪಾಲಾಗುತ್ತಾರೆ. ಹಸಿರು ವಲಯದಿಂದ ಶ್ರೀಮಂತರಿಗಷ್ಟೆ ಲಾಭ. ಜಮೀನು ವಶ ಪ್ರಕಟಣೆ ಹಿಂಪಡೆಯಬೇಕೆಂದರು.ಈ ಕುರಿತು ಸಿಎಂ ಹಾಗೂ ಕಂದಾಯ ಸಚಿವರಿಗೆ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಜಮೀನು ಹರಾಜು ಆದೇಶ ಹಿಂಪಡೆಯದಿದ್ದರೆ ನ.17ರಂದು ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಲಾಗುವುದೆಂದರು.ರಾಜ್ಯದಲ್ಲಿ ಎಸ್ಸಿ ವರ್ಗದವರಿಗೆ ಶೇ.15 ಮೀಸಲಾತಿ ಇದೆ, ಇದನ್ನು ಶೇ.17ಕ್ಕೇರಿಸಲು ನಾಗಮೋಹನ್‌ದಾಸ್ ವರದಿ ಶಿಫಾರಸ್ಸು ಮಾಡಿದೆ, ಈ ಮೀಸಲಾತಿಯನ್ನು ಶೇ.20ಕ್ಕೇರಿಸಬೇಕೆಂಬುದು ಬಿಎಸ್‌ಪಿ ಒತ್ತಾಯವಾಗಿದೆ. ಅದೇ ರೀತಿ ಎಸ್ಟಿ ಮೀಸಲಾತಿ ಶೇ.3 ಇದೆ, ಶೇ.7ಕ್ಕೆ ಶಿಫಾರಸ್ಸು ಆಗಿದೆ, ಇದನ್ನು ಶೇ.10ಕ್ಕೇರಿಸಬೇಕೆಂದು ಆಗ್ರಹಿಸಿದರು.ಎಸ್ಟಿ ಮೀಸಲಾತಿ ಶೇ.7ಕ್ಕೇರಿಸಲು ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಸರಕಾರಕ್ಕೆ ಗಡುವು ನೀಡಿದ್ದಾರೆ. ಗಡುವು ಮುಗಿದ ನಂತರ ಸ್ವಾಮೀಜಿಯವರು ಹಮ್ಮಿಕೊಳ್ಳುವ ಹೋರಾಟಕ್ಕೆ ಬಿಎಸ್‌ಪಿ ಬೆಂಬಲಿಸುತ್ತದೆ ಎಂದರು.

ಮೋದಿ ಸರಕಾರ ಆಡಳಿತಕ್ಕೆ ಬಂದಾಗಿನಿAದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಉದ್ಯೋಗ ನಷ್ಟ, ಜಿಎಸ್‌ಟಿ ಹೇರಿಕೆ, ದಲಿತರ ಮೇಲಿನ ದೌರ್ಜನ್ಯವೆ ಇವರ ಸಾಧನೆಯಾಗಿದೆ ಎಂದು ಟೀಕಿಸಿದರು.ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಚುನಾವಣೆ ಮುನ್ನ ಪ್ರಣಾಳಿಕೆಯಲ್ಲಿ ದಲಿತರಿಗೆ ಒಳ ಮೀಸಲಾತಿ ನೀಡುವ ವಾಗ್ದಾನ ಮಾಡಿ, ಅಧಿಕಾರಕ್ಕೆ ಬಂದಾಗ ಮರೆಯುತ್ತವೆ. ಇದರಿಂದ ದಲಿತ ಸಮುದಾಯಕ್ಕೆ ದೊಡ್ಡ ನಷ್ಟವಾಗುತ್ತಿದೆ ಎಂದರು.2018ರ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿ ತಪ್ಪು ಮಾಡಿದೆವು. ಹೊಂದಾಣಿಕೆಯಿAದ ಜೆಡಿಎಸ್‌ಗೆ ದೊಡ್ಡ ಲಾಭವಾಯಿತು, ಬಿಎಸ್‌ಪಿಗೆ ದೊಡ್ಡ ನಷ್ಟವಾಯಿತು. ಮುಂದೆ ಯಾವುದೆ ಚುನಾವಣೆಯಲ್ಲಿ ಯಾವ ಪಕ್ಷದೊಂದಿಗೂ ಹೊಂದಾಣಿಕೆ ಮಾಡುವುದಿಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತರ ಪಕ್ಷವಾಗಿ ಬಿಎಸ್‌ಪಿಯನ್ನು ರಾಜ್ಯದಲ್ಲಿ ಬೆಳಸಲು ಒತ್ತು ನೀಡಲಾಗುವುದೆಂದರು.ನ್ಯಾ.ಸಾಚಾರ್ ವರದಿ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಸಿದ್ಧಗೊಂಡಿತು. ಈ ವರದಿ ಮುಸ್ಲಿಂ ಸಮಾಜದವರ ಸಂಕಷ್ಟಮಯ ಬದುಕನ್ನು ಸಾಕ್ಷಾತ್ ಬಿಂಬಿಸಿದೆ. ಇದನ್ನು ಜಾರಿ ಮಾಡುವ ಜವಾಬ್ದಾರಿ ಇದ್ದ ಕಾಂಗ್ರೆಸ್ ಪಕ್ಷವೆ ಮೈಮರೆತಿದೆ ಎಂದರು.ಬಿಎಸ್‌ಪಿ ಮುಖಂಡರಾದ ಡಿ.ಹನುಮಂತಪ್ಪ, ಎಚ್.ಮಲ್ಲೇಶ್, ಕೋಟೆ ಮಲ್ಲೂರು ಪರಶುರಾಮ, ಮರುಳಸಿದ್ದಪ್ಪ ನ್ಯಾಮತಿ, ಎಸ್.ಕೇಶವ, ಆನಂದ ಕುಮಾರ್, ರವಿಕುಮಾರ್, ರಾಮಚಂದ್ರಪ್ಪ ನ್ಯಾಮತಿ, ಗಂಗಪ್ಪ, ಕೃಷ್ಣಪ್ಪ, ಕೆ.ಬಿ.ಮಂಜಪ್ಪ ಕಾರಿಗನೂರು ಇತರರಿದ್ದರು.