
ಬೆಂಗಳೂರು, ಮೇ ೧೦- ಇಂದು ನಡೆದಿರುವ ವಿಧಾನಸಭೆಯ ಮತದಾನದಲ್ಲಿ ಹಿರಿಯರು, ಕಿರಿಯರೆನ್ನದೆ ಎಲ್ಲರೂ ಅತ್ಯುತ್ಸಾಹದಿಂದ ಮತಚಲಾಯಿಸಿದ್ದು, ರಾಜ್ಯದ ಹಲವೆಡೆ ಶತಾಯುಷಿಗಳು ಮತ ಹಾಕಿ ತಮ್ಮ ಹಕ್ಕು ಚಲಾಯಿಸಿದ ಸಂತಸದಿಂದ ಬೀಗಿದರೆ, ಇದೇ ಮೊದಲ ಬಾರಿಗೆ ಮತದಾನದ ಹಕ್ಕನ್ನು ಪಡೆದಿರುವ ೧೮ ವರ್ಷದ ಯುವ ಮತದಾರರು ಸಡಗರ-ಸಂಭ್ರದಿಂದ ಮತ ಹಾಕಿ ಖುಷಿಪಟ್ಟರು.
ಮತದಾನದ ಈ ಪವಿತ್ರ ಕಾರ್ಯದಲ್ಲಿ ನಾಡಿನ ಎಲ್ಲ ಮಠಗಳ ಸ್ವಾಮೀಜಿಗಳು, ಸಾಧು-ಸಂತರು, ಆಧ್ಯಾತ್ಮಿಕ ಗುರುಗಳು, ಸಿನಿ ತಾರೆಯರು, ಖ್ಯಾತ ಕ್ರೀಡಾಪಟುಗಳು, ರಾಜಕೀಯ ನೇತಾರರು ಹೀಗೆ ಎಲ್ಲರೂ ಮತದಾನದಲ್ಲಿ ಭಾಗಿಯಾದರು.
ಶತಾಯುಷಿಗಳ ಮತದಾನ
ಯಾದಗಿರಿ ಜಿಲ್ಲೆಯ ಶಹಪುರ ಮತಕ್ಷೇತ್ರದ ನಗನೂರ ಗ್ರಾಮದಲ್ಲಿ ಶತಾಯುಷಿ ಅಜ್ಜಿ ದೇವಕ್ಕಮ್ಮ (೧೦೫) ಮೊಮ್ಮಗನ ಜತೆ ಕಾರಿನಲ್ಲಿ ಬಂದು ಮತ ಹಾಕಿ ಖುಷಿಪಟ್ಟರು. ಮಂಗಳೂರಿನಲ್ಲಿ ಆಳ್ವಾರ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್‌ಆಳ್ವಾ ಅವರ ತಂದೆ ಶತಾಯುಷಿ ಮಿಜಾರಗುತ್ತು ಆನಂದ ಆಳ್ವಾ (೧೦೭) ಇವರು ಮೂಡಬಿದಿರೆ ತಾಲ್ಲೂಕಿನ ಬಂಗಬೆಟ್ಟು ಶಾಲೆಯಲ್ಲಿ ಮತ ಚಲಾಯಿಸಿದರು.
ಶಿವಮೊಗ್ಗದ ಸಾಗರ ವಿಧಾನಸಭಾ ಕ್ಷೇತ್ರದ ೧೦೧ ವರ್ಷದ ಬಿ.ಬಿ. ಜಾನ್ ಮತದಾನ ಮಾಡಿದರು. ಹಲವೆಡೆ ನವದಂಪತಿಗಳು ಮತದಾನಕ್ಕೆ ಬಂದು ಮತ ಹಾಕಿದ್ದು, ಮೈಸೂರಿನ ಪಿರಿಯಾಪಟ್ಟಣದಲ್ಲಿ ನವ ದಂಪತಿಗಳಾದ ಬಿಪಿನ್ ಮತ್ತು ಅಕ್ಷತಾ ತಂದೆ-ತಾಯಿಗಳೊಂದಿಗೆ ಬಂದು ಮತ ಹಾಕಿದರು.
ನಾಡಿನ ಪ್ರಸಿದ್ಧ ಸಿದ್ದಗಂಗಾ ಮಠದ ಸ್ವಾಮೀಜಿಗಳಾದ ಸಿದ್ದಲಿಂಗಸ್ವಾಮೀಜಿ, ಸುತ್ತೂರು ಮಠದ ಶ್ರೀಗಳು, ರಂಭಾಪುರಿ ಶ್ರೀಗಳು, ಉಜ್ಜಯಿನಿ ಶ್ರೀಗಳು, ಆದಿಚುಂಚನಗಿರಿ ಶ್ರೀಗಳು, ಕೂಡಲ ಸಂಗಮದ ಪಂಚಮಸಾಲಿ ಶ್ರೀಗಳು, ಹರಿಹರದ ಪಂಚಮಸಾಲಿ ಪೀಠದ ಶ್ರೀಗಳು, ಧರ್ಮಸ್ಥಳದ ಡಾ. ವೀರೇಂದ್ರ ಹೆಗಡೆ ಸೇರಿದಂತೆ ಹಲವು ಧಾರ್ಮಿಕ ಗುರುಗಳು, ತಮ್ಮ ಹಕ್ಕು ಚಲಾಯಿಸಿದರು.
ರಾಜಕೀಯ ನಾಯಕರ ಮತ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಜಗದೀಶ್ ಶೆಟ್ಟರ್, ಸದಾನಂದಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಬಿಜೆಪಿ ಅಧ್ಯಕ್ಷ ನಳೀನ್‌ಕುಮಾರ್ ಕಟೀಲು ಸೇರಿದಂತೆ ಹಲವು ರಾಜಕೀಯ ನಾಯಕರುಗಳು ತಮ್ಮ ಮತಗಟ್ಟೆಗಳಲ್ಲಿ ಮತ ಚಲಾಯಿಸಿದರು.
ರಾಜ್ಯ ಸಚಿವ ಸಂಪುಟದ ಸಚಿವರುಗಳು, ಸಂಸದರು, ಹಾಲಿ ಶಾಸಕರು, ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ಕುಟುಂಬ ಸದಸ್ಯರೊಂದಿಗೆ ಮತಗಟ್ಟೆಗೆ ಬಂದು ಮತ ಹಾಕಿದರು.