ಹಕ್ಕು ಚಲಾಯಿಸಲು ಮತದಾರರ ನಿರುತ್ಸಾಹ

ಸಂಜೆವಾಣಿ ನ್ಯೂಸ್
ಮೈಸೂರು.ಏ.27:- ಕಳೆದ ವಿಧಾನಸಭಾ ಚುನಾವಣೆ ಸೇರಿದಂತೆ ಪ್ರತಿ ಚುನಾವಣೆಯಲ್ಲಿ ಬಿರುಸಿನ ಮತದಾನ ಕಂಡುಬರುತ್ತಿದ್ದ ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಮೈಸೂರು-ಕೊಡಗು ಲೋಕಸಭಾ ಚುನಾವಣೆಯ ಮತದಾನ ತುಸು ನೀರಸದಿಂದ ಸಾಗಿತು.
ಬೆಳಗ್ಗೆ 11 ಗಂಟೆ ಅವಧಿಯಲ್ಲಿ ಕ್ಷೇತ್ರದಲ್ಲಿ ಕೇವಲ ಶೇ.22.6ರಷ್ಟು ಮಾತ್ರ ಮತದಾನವಾಗಿತ್ತು. ಈ ವೇಳೆಗೆ ನಗರ ವ್ಯಾಪ್ತಿಯ ಕೃಷ್ಣರಾಜ ಕ್ಷೇತ್ರದಲ್ಲಿ ಶೇ.23.37, ನರಸಿಂಹರಾಜದಲ್ಲಿ 23.93 ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ 24.96 ರಷ್ಟು ಮತದಾನವಾಗಿತ್ತು. ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಚಾಮರಾಜ ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರವಾ ಗಿದ್ದು, ವಿಜಯನಗರ, ಜಯಲಕ್ಷ್ಮೀಪುರಂ, ಯಾದವಗಿರಿ, ಸರಸ್ವತಿಪುರಂ, ಸೇರಿದಂತೆ ಮೇಲ್ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುವ ಬಡಾವಣೆಗಳಿವೆ. ಜತೆಗೆ, ಹಳ್ಳಿ ವಾತಾವರಣದಂತಹ ಪಡುವಾರಹಳ್ಳಿ, ಕುಂಬಾರಕೊಪ್ಪಲು, ತೊಣಚಿಕೊಪ್ಪಲು, ಮಂಚೇಗೌಡನಕೊಪ್ಪಲು, ಕುಕ್ಕರಹಳ್ಳಿ, ಒಕ್ಕಲಿಗಕೇರಿ, ಸೊಪ್ಪಿನ ಕೇರಿ, ಉಪ್ಪಿನ ಕೇರಿ ಬಡಾವಣೆಗಳು ಇವೆ. ವಿಭಿನ್ನ ಸಂಸ್ಕೃತಿಯ ಈ ಕ್ಷೇತ್ರದಲ್ಲಿ ಪ್ರತಿ ಚುನಾವಣೆಯಲ್ಲಿ ಮತದಾನ ನೀರಸದಿಂದ ಸಾಗಿತ್ತು.
ಬೆಳಗ್ಗೆ 7ಕ್ಕೆ ಶುರುವಾದ ಮತದಾನ 9 ಗಂಟೆ ಹೊತ್ತಿಗೆ ಇಲ್ಲಿ ಶೇ.9.9ರಷ್ಟಾಗಿತ್ತು. ಆದರೆ, ಕೃಷ್ಣರಾಜ(ಶೇ.11.07), ನರಸಿಂಹ ರಾಜ(ಶೇ.10.84), ಚಾಮುಂಡೇಶ್ವರಿ ಕ್ಷೇತ್ರ(ಶೇ.10.98) ತುಸು ಹೆಚ್ಚು ಮತದಾನವಾಗಿತ್ತು ಎನ್ನುವುದು ಗಮನಾರ್ಹ.
11 ಗಂಟೆ ಸುಮಾರಿಗೂ ಇಲ್ಲಿ ಶೇ.22.6 ರಷ್ಟು ಮತದಾನವಾಗಿತ್ತು. ಆಗಲೂ ಚಾಮರಾಜ ಕ್ಷೇತ್ರದ ನಗರ ವ್ಯಾಪ್ತಿಯ ನಾಲ್ಕು ಕ್ಷೇತ್ರಗಳಿಗಿಂತ ಹಿಂದಿತ್ತು.
ಮಧ್ಯಾಹ್ನ 1 ಗಂಟೆ ಹೊತ್ತಿಗೂ ಚಾಮರಾಜದಲ್ಲಿ ಶೇ.37.2 ರಷ್ಟು ಮತದಾನವಾಗಿತ್ತು. ಆ ವೇಳೆಯೂ ಕೃಷ್ಣ ರಾಜ(ಶೇ.37.43), ನರಸಿಂಹರಾಜ (ಶೇ.38.88), ಚಾಮುಂ ಡೇಶ್ವರಿ ಕ್ಷೇತ್ರ(ಶೇ.42.42) ತುಸು ಹೆಚ್ಚಿನ ಮತದಾನವಾಗಿತ್ತು. ಈ ಪ್ರಮಾಣ 3 ಗಂಟೆ ವೇಳೆಗೆ ಚಾಮರಾಜದಲ್ಲಿ (ಶೇ.47), ಕೃಷ್ಣರಾಜ (ಶೇ.47.4), ನರಸಿಂಹರಾಜ (ಶೇ.50.47), ಚಾಮುಂಡೇಶ್ವರಿ ಕ್ಷೇತ್ರ (ಶೇ.55.56) ಮತದಾನವಾಗಿತ್ತು.
ಸಂಜೆ 5 ಗಂಟೆ ಹೊತ್ತಿಗೂ ಚಾಮರಾಜದಲ್ಲಿ ಶೇ.53.03 ರಷ್ಟು ಮತದಾನವಾಗಿತ್ತು. ಆ ವೇಳೆಯೂ ಕೃಷ್ಣರಾ ಜ(ಶೇ.57.49), ನರಸಿಂಹರಾಜ(ಶೇ.61.71), ಚಾಮುಂಡೇಶ್ವರಿ ಕ್ಷೇತ್ರ(ಶೇ.68.75) ಹೆಚ್ಚಿನ ಮತದಾನವಾಗಿತ್ತು.
ರಣಬಿಸಿಲಿನ ಕಾರಣ ಚಾಮರಾಜ ಕ್ಷೇತ್ರ ಬಹುತೇಕ ಮತದಾನ ಬಿರುಸಿನಿಂದ ನಡೆಯಲು ಸಾಧ್ಯವಾಗಲಿಲ್ಲ. ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಯುವ ಜನರು, ಮಧ್ಯವಯಸ್ಕರು ಕಂಡು ಬಂದರು. ಆದರೆ, ಬಿಸಿಲಿನ ಕಾರಣ ವೃದ್ಧರು ಹೆಚ್ಚಾಗಿ ಮತಗಟ್ಟೆಗಳಲ್ಲಿ ಈ ಸಮಯದಲ್ಲಿ ಕಂಡು ಬರಲಿಲ್ಲ. ಕ್ಷೇತ್ರದಲ್ಲಿ ಕೆಲ ಸಣ್ಣಪುಟ್ಟ ಗೊಂದಲ ಬಿಟ್ಟರೆ ಎಲ್ಲೆಡೆ ಶಾಂತಿಯುತ ಮತದಾನವಾಗಿದೆ. ಆದರೆ, 3 ಗಂಟೆಯ ನಂತರ ಸರಸ್ವತಿಪುರಂನ ಟಿಟಿಎಲ್ ಶಾಲೆಯ ಮತಗಟ್ಟೆ, ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆ, ಮಾತೃಮಂಡಳಿ ಶಾಲೆ, ವಿವಿ ಮೊಹಲ್ಲಾದ ನಿರ್ಮಲ ಶಾಲೆ, ಕುಂಬಾರಕೊಪ್ಪಲಿನ ಶಾಲೆ ಸೇರಿದಂತೆ ಇನ್ನಿತರ ಕಡೆ ಕೊಂಚ ಚುರುಕಿನಿಂದ ಮತದಾನ ನಡೆಯಿತು. ವೃದ್ಧರು, ಅಂಗವಿಕಲರು ವೀಲ್ ಚೇರ್ ಬಳಕೆ ಮಾಡಿದರು. ಕುಡಿಯುವ ನೀರು ಸಹಿತ ಇತ್ಯಾದಿ ಅಗತ್ಯ ಸೌಲಭ್ಯವನ್ನು ಕಲ್ಪಿಸಲಾಗಿತ್ತು.
ಕಲಾವಿದ ಬಾದಲ್ ನಂಜುಂಡಸ್ವಾಮಿ ಮತ ಚಲಾಯಿಸಿದರು. ಕುಕ್ಕರಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಚಲಾಯಿಸಿದರು. ಬಳಿಕ ಮಾತನಾಡಿದ ಬಾದಲ್, ಚುನಾವಣಾ ಪ್ರಕ್ರಿಯೆ ಅತ್ಯಂತ ವ್ಯವಸ್ಥಿತವಾಗಿ ನಡೆದಿದ್ದು, ಮತ ಚಲಾವಣೆ ಮಾಡುವುದು ಮತದಾರರ ಕರ್ತವ್ಯ. ಪ್ರಜಾಪ್ರಭುತ್ವದಲ್ಲಿ ಮತ ಚಲಾಯಿಸುವ ಬಹಳ ಮುಖ್ಯ. ಒಂದು ಮತ ಎಂದರೆ ಒಂದು ಜೀವ ಇದಂತೆ.
ಅದು ಬಡವರ ಮತ್ತು ನೊಂದವರ ಬದುಕು ಕೂಡ. ಅದು ಒಂದು ಧ್ವನಿಯಾಗಿಯೂ ಕೆಲಸ ಮಾಡುತ್ತದೆ. ಒಂದೊಂದು ಮತಕ್ಕೂ ಶಕ್ತಿಯಿದ್ದು, ಒಂದು ಮತದಿಂದ ಏನಾದರೂ ಬದಲಾಗಬಹುದು. ಹಾಗಾಗಿ ಎಲ್ಲರೂ ಮತ ಹಾಕಬೇಕು. ನನ್ನ ಹಕ್ಕು ಚಲಾಯಿಸುವ ತವಕ ಇತ್ತು. ಅದನ್ನು ಪೂರ್ಣಗೊಳಿಸಿದ ಹೆಮ್ಮೆ ಇದೆ ಎಂದು ಹೇಳಿದರು.