
ಕೆ.ಆರ್.ಪುರ,ಜು.೨೧-ದಲಿತರಿಗೆ ನೀಡಿದ್ದ ನಿವೇಶನ ಹಾಗೂ ಹಕ್ಕು ಪತ್ರವನ್ನು ರದ್ದು ಪಡಿಸಿರುವ ಜಿಲ್ಲಾಧಿಕಾರಿಗಳ ನಡೆ ವಿರೋಧಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಸದಸ್ಯರು ಹಾಗೂ ನಿವೇಶನ ವಚಿಂತರಾದವರು ಕೆ.ಆರ್.ಪುರದ ಅಂಬೇಡ್ಕರ್ ಪ್ರತಿಮೆ ಬಳಿ ಧರಣಿ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ನಗರದ ಉಪ ಪ್ರಧಾನ ಸಂಚಾಲಕ ಮಣಿಪಾಲ್ ರಾಜಪ್ಪ ಅವರು
ಯಲಹಂಕ ತಾಲ್ಲೂಕಿನ ಮೇಡಿ ಅಗ್ರಹಾರ ಗ್ರಾಮದ ಸರ್ವೆ ನಂ. ೨೪ ರಲ್ಲಿ ೯ ಎಕರೆ ೧೨ ಗುಂಟೆ ಜಮೀನಿನಲ್ಲಿ ಕರ್ನಾಟಕ ದಲಿತ ಕ್ರಿಯಾ ಸಮಿತಿಯ ಸದಸ್ಯರಿಗೆ ಎಲ್.ಎನ್.ಡಿ/ಸಿ.ಆರ್.೧೪೨/೨೦೦೧-೦೨ ರ ಆದೇಶದಂತೆ ನಿವೇಶನ ಹಕ್ಕುಪತ್ರ ಹಂಚಿಕೆ ಮಾಡಿದ್ದು,ಅದನ್ನು ರದ್ದು ಪಡಿಸಿ ನಿವೇಶನಗಳನ್ನು ಮರು ಹಂಚಿಕೆ ಮಾಡುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬಡಾವಣೆಯ ನಕ್ಷೆಯಂತೆ ೨೦೬ ನಿವೇಶನಗಳನ್ನು ಸರ್ಕಾರ ನಿಗದಿಪಡಿಸಿದಂತೆ ೧೨ಸಾವಿರ ಹಣವನ್ನು ಪಾವತಿಸಿ ಪಡೆದಿದ್ದು,ಈ ನಿವೇಶನವನ್ನು ಮರು ಹಂಚಿಕೆ ಮಾಡಲು ಅನುಮೋದನೆ ನೀಡಿರುವ ಜಿಲ್ಲಾಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.
ನೂತನವಾಗಿ ಮಾಡಿರುವ ಆದೇಶವನ್ನು ರದ್ದುಪಡಿಸಲು ಅಥವಾ ಆದೇಶವನ್ನು ತಡೆಹಿಡಿಯಲು ಯಲಹಂಕ ತಹಶೀಲ್ದಾರ್‌ರವರಿಗೆ ಈ ಮೂಲಕ ಮನವಿ ಮಾಡಿಕೊಂಡರು.
ಯಲಹಂಕದ ನಿವೇಶನ ಸ್ಥಳದಲ್ಲಿ ಮೊದಲು ಹಂಚಿಕೆಯಾದ ದಲಿತರಿಗೆ, ಮನೆಯನ್ನು ಕಟ್ಟಿಕೊಳ್ಳಲು ಆದೇಶ ನೀಡಬೇಕೆಂದು ಆಗ್ರಹಿಸಿದರು.
ನೊಂದ ದಲಿತ ಮತ್ತು ಹಿಂದುಳಿದ ವರ್ಗಗಳಿಗೆ ಆಗಿರುವ ತೊಂದರೆಯ ಬಗ್ಗೆ ಗಮನಹರಿಸಿ ನ್ಯಾಯ ಒದಗಿಸುವ ಕಾರ್ಯ ಮಾಡಬೇಕೆಂದು ಸದಸ್ಯರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಮುನಿನಂಜಪ್ಪ,ನಾರಾಯಣಸ್ವಾಮಿ, ಗೊವಿಂದಕುಮಾರ್,ಭರತ್ ಇದ್ದರು.