
ಮುಳಬಾಗಿಲು.ಏ೬: ಡಾ.ಬಿ.ಆರ್.ಅಂಬೇಡ್ಕರ್ ರವರು ರಚಿಸಿರುವ ಸಂವಿಧಾನದಕ್ಕೆ ಪ್ರತಿಯೊಬ್ಬರೂ ಗೌರವಿಸಬೇಕು, ಹಕ್ಕುಗಳು ಹಾಗೂ ಜವಾಬ್ದಾರಿಗಳನ್ನು ತಪ್ಪದೆ ಪಾಲಿಸಿ ಸಮಾಜದ ಮುಖ್ಯವಾಹಿನಿಗೆ ಬರಬೇಕೆಂದು ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರೂ ಆದ ಶಾಸಕ ಹೆಚ್.ನಾಗೇಶ್ ತಿಳಿಸಿದರು.
ತಾಲೂಕಿನ ಹೊನಗನಹಳ್ಳಿ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರ ನೂತನ ಪುತ್ಥಳಿಯನ್ನು ಅನಾವರಣಗೊಳಿಸಿ ಮಾತನಾಡಿ ಡಾ.ಬಿ.ಆರ್. ಅಂಬೇಡ್ಕರ್ ರವರಿಂದ ಪರಿಶಿಷ್ಟಜಾತಿ ಮತ್ತು ಪಂಗಡದ ಜನಾಂಗದವರಿಗೆ ಸಮಾಜದಲ್ಲಿ ಸ್ಥಾನಮಾನ ಹಾಗೂ ಸಮಾನತೆ ದೊರೆಯಲು ಸಾಧ್ಯವಾಯಿತು, ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಗೆ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡಿಕೊಳ್ಳಲು ಜನರು ಮುಂದಾಗಬೇಕು, ಅಧಿಕಾರ ಸಿಕ್ಕ ಮೇಲೆ ಜನರ ಮೇಲೆ ಸವಾರಿ ಮಾಡುವಂತಹ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ವಿಧಾನ ಬದಲಾವಣೆ ಆಗಬೇಕು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ವ್ಯಕ್ತಿಗಳ ಆಯ್ಕೆ ಉತ್ತಮ ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ವೈರತ್ವ, ಅಸೂಯೆ ಮೊದಲಾದವುಗಳನ್ನು ಬೆಳೆಸಿಕೊಳ್ಳುವುದಕಿಂತ ಅಭಿವೃದ್ಧಿ ಕಾರ್ಯಗಳ ಕಡೆ ಹೆಚ್ಚಿನ ಗಮನ ಹರಿಸಬೇಕೆಂದು ಸಲಹೆ ನೀಡಿದರು.
ತಾ.ಪಂ ಅಧ್ಯಕ್ಷ ಎ.ವಿ.ಶ್ರೀನಿವಾಸ್ ಮಾತನಾಡಿ ಅಂಗೊಂಡಹಳ್ಳಿ ಗ್ರಾ.ಪಂಗೆ ೪ಹೈ ಮಾಸ್ ವಿದ್ಯುತ್ ದೀಪಗಳು ಸೇರಿದಂತೆ ೩೦ ಲಕ್ಷ ವೆಚ್ಚದಲ್ಲಿ ಹೊನಗಾನಹಳ್ಳಿಗೆ ಡಾಂಬರು ರಸ್ತೆ ಅಭಿವೃದ್ಧಿಗೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುತ್ತದೆ ಎಂದು ಹೇಳಿದರು.
ಎಪಿಎಂಸಿ ಅಧ್ಯಕ್ಷ ಗೊಲ್ಲಹಳ್ಳಿ ವೆಂಕಟೇಶ್, ದರಖಾಸ್ತು ಸಮಿತಿ ಸದಸ್ಯರಾದ ಬೈರಪ್ಪ, ಪೆದ್ದಪ್ರಯ್ಯ, ಗ್ರಾ.ಪಂ ಸದಸ್ಯ ಬ್ಯಾಟಪ್ಪ, ಮುಖಂಡರಾದ ಹೆಚ್.ಆರ್.ಮಂಜುನಾಥ್, ಕೃಷ್ಣ ಮತ್ತಿತರರು ಇದ್ದರು.