ಹಕ್ಕಿಜ್ವರ ರಾಜ್ಯಗಳಲ್ಲಿ ಕಟ್ಟೆಚ್ಚರ

ನವದೆಹಲಿ,ಜ.೧೦- ಹಕ್ಕಿಜ್ವರ ಉತ್ತರ ಪ್ರದೇಶದಲ್ಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಎಲ್ಲ ರಾಜ್ಯಗಳಲ್ಲೂ ಕಟ್ಟೆಚ್ಚರ ವಹಿಸುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರೊಂದಿಗೆ ೭ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿದ್ದು, ದೆಹಲಿಯಲ್ಲಿ ಹಕ್ಕಿಜ್ವರದ ಪರೀಕ್ಷಾ ವರದಿಗಾಗಿ ಕಾಯಲಾಗುತ್ತಿದೆ.
ಉತ್ತರ ಪ್ರದೇಶ ರಾಜ್ಯದಲ್ಲಿ ಹಕ್ಕಿಜ್ಬರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಕಾನ್ಪುರ ಪ್ರಾಣಿ ಸಂಗ್ರಹಾಲಯವನ್ನು ಬಂದ್ ಮಾಡಲಾಗಿದ್ದು, ಮುಂದಿನ ೧೫ ದಿನಗಳವರೆಗೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ.
ಉತ್ತರ ಪ್ರದೇಶ ಮತ್ತು ಹರಿಯಾಣ ರಾಜ್ಯಗಳಲ್ಲಿ ಇನ್‌ಫ್ಲೂಯಿನ್ಜಾ ಕಾಣಿಸಿಕೊಂಡಿದೆ. ದೆಹಲಿಯಲ್ಲಿ ಈಗಾಗಲೇ ಪಕ್ಷಿಗಳು ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿದೆ. ಇವುಗಳ ವರದಿಯನ್ನು ಪ್ರಯೋಗಾಲಯಕ್ಕೆ ರವಾನಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.
ಕೇರಳ, ರಾಜಸ್ತಾನ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ಹರಿಯಾಣ, ಗುಜರಾತ್ ಮತ್ತು ಉತ್ತರ ಪ್ರದೇಶದಲ್ಲಿ ಹಕ್ಕಿಜ್ವರ ಬಾಧಿಸುತ್ತಿದೆ. ಇದರಿಂದಾಗಿ ಹಕ್ಕಿಜ್ವರ ಬೇರೆ ರಾಜ್ಯಗಳಿಗೂ ವ್ಯಾಪಿಸುವ ಭೀತಿ ಎದುರಾಗಿದೆ.
ರಾಜಧಾನಿ ನವದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ೩೫ ಕಾಗೆಗಳು ಸಾವನ್ನಪ್ಪಿವೆ. ಈ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಹಕ್ಕಿಗಳ ರಫ್ತನ್ನು ನಿಷೇಧಿಸಿದ್ದು, ಘಾಜಿಪುರದಲ್ಲಿರುವ ಅತಿ ದೊಡ್ಡ ಕೋಳಿ ಮಾರುಕಟ್ಟೆಯನ್ನು ಬಂದ್ ಮಾಡಲಾಗಿದೆ.
ಮಹಾರಾಷ್ಟ್ರದ ಪ್ರಭಾನಿ ಜಿಲ್ಲೆಯ ಮುರುಂಬಾ ಗ್ರಾಮದಲ್ಲಿ ೯೦೦ ಬಾತುಕೋಳಿಗಳು ಸಾವನ್ನಪ್ಪಿವೆ. ಇವುಗಳ ಮಾದರಿಯನ್ನು ಪರೀಕ್ಷೆಗೆ ರವಾನಿಸಲಾಗಿದೆ.
ಕೇರಳದಲ್ಲಿ ೨ ಜಿಲ್ಲೆಗಳಲ್ಲಿ ಕಾಣಿಸಿಕೊಂಡಿದ್ದ ಹಕ್ಕಿಜ್ವರದ ಹಿನ್ನೆಲೆಯಲ್ಲಿ ಕೋಳಿಗಳ ಸಾಮೂಹಿಕ ಮಾರಣಹೋಮವನ್ನು ಪೂರ್ಣಗೊಳಿಸಲಾಗಿದೆ. ಹಕ್ಕಿಜ್ವರ ಹರಡದಂತೆ ತೀವ್ರ ನಿಗಾ ವಹಿಸಲಾಗಿದೆ.