ಹಕ್ಕಿಜ್ಬರ ಕುಕ್ಕುಟೋದ್ಯಮಕ್ಕೆ ಭಾರಿ ಪೆಟ್ಟು

ನವದೆಹಲಿ,ಜ.೯- ಉತ್ತರ ಭಾರತದಲ್ಲಿ ಕಾಣಿಸಿಕೊಂಡಿರುವ ಹಕ್ಕಿಜ್ವರದಿಂದಾಗಿ ದೇಶದಲ್ಲಿನ ಕುಕ್ಕುಟ ಉದ್ಯಮ ಶೇ. ೫೦ ರಷ್ಟು ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಹಕ್ಕಿಜ್ವರ ನಿಯಂತ್ರಣಕ್ಕೆ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. ಆದರೂ ಮೊಟ್ಟೆ, ಕೋಳಿಮಾಂಸ ಸೇವಿಸುವುದು ಕಡಿಮೆಯಾಗಿದ್ದು, ಕುಕ್ಕುಟ ಉದ್ಯಮ ಸಂಕಷ್ಟಕೆ ಗುರಿಯಾಗಿದೆ.
ಮಾರಕ ಕೊರೊನಾ ಸೋಂಕಿನ ನಡುವೆ ಈಗ ಹಕ್ಕಿಜ್ವರ ಕಾಣಿಸಿಕೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕಳೆದ ಕೆಲವು ವಾರಗಳಿಂದ ಗುಜರಾತ್, ಹರಿಯಾಣ, ಮಧ್ಯಪ್ರದೇಶ, ಹಿಮಾಚಲ ಪ್ರದೇಶ, ರಾಜಾಸ್ತಾನ ಮತ್ತು ಕೇರಳ ರಾಜ್ಯಗಳಲ್ಲಿ ಸಾವಿರಾರು ಹಕ್ಕಿಗಳು ಮೃತಪಟ್ಟಿವೆ.
ಇದಕ್ಕೆ ಅವಿಯನ್ ಇನ್‌ಫ್ಲುಯೆಂಜಾ-ಎ (ಹೆಚ್-೫ ಎನ್-೧) ವೈರಾಣುವಿನಿಂದಾಗಿ ಹಕ್ಕಿಗಳು ಸಾವನ್ನಪ್ಪಿವೆ. ಇದು ಮನುಷ್ಯರ ಮೇಲೂ ಪರಿಣಾಮ ಬೀರುವ ಆತಂಕ ಎದುರಾಗಿದೆ.
ಹಕ್ಕಿಜ್ವರ ನಿಯಂತ್ರಣಕ್ಕೆ ಕಠಿಣ ಕ್ರಮಕೈಗೊಂಡಿದ್ದರೂ ಮೊಟ್ಟೆ, ಕೋಳಿಮಾಂಸ ಮಾರಾಟದಲ್ಲಿ ಶೇ. ೫೦ ರಷ್ಟು ಇಳಿಕೆ ಕಂಡಿದೆ.
ನವದೆಹಲಿಯ ಗಾಜಿಪುರ ಕೋಳಿ ಮಂಡಿಗೆ ಹಕ್ಕಿಜ್ಬರದ ಬಿಸಿ ತಟ್ಟಿದೆ. ದೆಹಲಿಯಲ್ಲಿ ಹಕ್ಕಿಜ್ವರ ಪ್ರಕರಣಗಳು ಕಾಣಿಸಿಕೊಳ್ಳದಿದ್ದರೂ ವ್ಯಾಪಾರಿಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಈ ಬಗ್ಗೆ ಗಮನ ಹರಿಸಿರುವ ದೆಹಲಿ ಸರ್ಕಾರ ಕ್ರಮಕೈಗೊಳ್ಳಲು ಮುಂದಾಗಿದೆ.
ಈ ಸಂಬಂಧ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ನೇತೃತ್ವದಲ್ಲಿ ಉನ್ನತ ಸಭೆ ಸೇರಿ ಪರಿಸ್ಥಿತಿ ಪರಾಮರ್ಶೆ ನಡೆಸಿದೆ.
ಮಧ್ಯಪ್ರದೇಶದಲ್ಲಿ ಕಳೆದ ಒಂದು ವಾರದ ಅವಧಿಯಲ್ಲಿ ನೂರಾರು ಹಕ್ಕಿಗಳು ಸಾವನ್ನಪ್ಪಿವೆ. ಇದರಿಂದಾಗಿ ಕೋಳಿ ಮಾಂಸ ಮಾರಾಟ ಶೇ. ೪೦ ರಷ್ಟು ಕುಸಿತ ಕಂಡಿದೆ.
ಕೋಳಿಮಾಂಸ ಪ್ರತಿ ಕೆಜಿಗೆ ೧೦೦ ರೂ. ಮಾರಾಟವಾಗುತ್ತಿತ್ತು, ಈಗ ೬೫ಕ್ಕೆ ಇಳಿಕೆಯಾಗಿದೆ. ಅದೇ ರೀತಿ ೧೨ ಮೊಟ್ಟೆಗಳು ೮೪ ರೂ.ಗೆ ಮಾರಾಟವಾಗುತ್ತಿತ್ತು, ಈಗ ೭೨ ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ.
ಹರಿಯಾಣ, ಉತ್ತರ ಪ್ರದೇಶ, ಪಂಜಾಬ್ ಮತ್ತು ಹಿಮಾಚಲ ಪ್ರದೇಶಗಳಲ್ಲು ಪರಿಸ್ಥಿತಿ ಭಿನ್ನವಾಗಿಲ್ಲ. ಹಕ್ಕಿಜ್ವರದಿಂದಾಗಿ ಕುಕ್ಕುಟೋದ್ಯಮ ತೀವ್ರವಾಗಿ ಬಾಧಿಸುತ್ತಿದೆ.