ಹಕ್ಕಬುಕ್ಕರು ಕುರಬರಲ್ಲ ಹೇಳಿಕೆಗೆ ಕುರುಬರ ಸಂಘ ಖಂಡನೆ

ಬಳ್ಳಾರಿ ಏ 02 : ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ “ಹಕ್ಕಬುಕ್ಕರು” ಕುರುಬ ಸಮಾಜದವರಲ್ಲ ಎಂಬ ಹೇಳಿಕೆಯನ್ನು ಜಿಲ್ಲಾ ಕುರುಬರ ಸಂಘ ಖಂಡಿಸಿದೆ.
14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು “ಹಕ್ಕಬುಕ್ಕರು” ಸ್ಥಾಪಿಸಿದರು. ಈ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬರು ಎನ್ನುವ ಬಗ್ಗೆ ಎಲ್ಲಾ ಇತಿಹಾಸ ತಜ್ಞರು, ಏಕಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 50 ಕ್ಕೂ ಹೆಚ್ಚು ದಾಖಲೆಗಳು ಕುರುಬ ಕುಲಸಂಜಾತರೆಂದು ಸಾಕ್ಷಿ ಹೇಳುತ್ತವೆ, ವಿದೇಶಿ ತಜ್ಞರ ಹೇಳಿಕೆಗಳು, ಗೆಜೆಟ್ಟಿಯ‌ರ್ ಗಳು, ಕೈಪಿಯತ್ತುಗಳು, ಗದ್ಯಕೃತಿಗಳು, ಕಾವ್ಯಗಳು, ಶಾಸನಗಳು ಸರ್ವಜ್ಞನ ತ್ರಿಪದಿ, ಜನಪದ ಹಾಡು-ಕಥೆ-ವಾಡಿಕೆಗಳು ಇವುಗಳಲ್ಲಿ ಸಹ ಕುರುಬರು ಎಂದಿದೆ. ರಾಬರ್ಟ್ ಸಿವೆಲ್, ಹೆಚ್.ವಿಲ್ಸನ್ ಮಿ.ಕೌಟೋ. ಮುಂತಾದ ಹತ್ತು ವಿದೇಶಿ ವಿದ್ವಂಸ ಮಹನೀಯರು, ಇತಿಹಾಸ ತಜ್ಞರು ಹಕ್ಕಬುಕ್ಕರನ್ನು ಕುರುಬರೆಂದು ಹೇಳಿರುತ್ತಾರೆ.
ಅದೇ ರೀತಿ ಭಾರತದಮತ್ತು ಕರ್ನಾಟಕದ ಇತಿಹಾಸಕಾರರು ಅವರನ್ನು ಕನ್ನಡಿಗರು ಮತ್ತು ಕುರುಬರು ಎಂದು ಏಕಕಂಠದಿಂದ ಘೋಷಿಸಿದ್ದಾರೆ.
ಇಷ್ಟೆಲ್ಲಾ ದಾಖಲೆಗಳ ಆಧಾರದ ಮೇಲೆ ಹಕ್ಕಬುಕ್ಕರು ಕುರುಬರು ಆದ ಕಾರಣ ಹಕ್ಕಬುಕ್ಕರ ಸವಿನೆನಪಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ಗುಲ್ಬರ್ಗ ವಿಭಾಗದ ಸಿದ್ದರಾಮನಂದಪುರಿ ಸ್ವಾಮೀಜಿಯವರ ಸಾನಿಧ್ಯತೆಯಲ್ಲಿ ಏಪ್ರೀಲ್ 18, 2021 ರಂದು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನ ಆಚರಿಸುತ್ತಿದೆ.
ಈ ವಿಷಯವನ್ನು ಆಧಾರಿಸಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಜಂಬಯ್ಯ ನಾಯಕ ಅವರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರು ಕುರುಬ ಜನಾಂಗದವರು ಅಲ್ಲ. ವಾಲ್ಮೀಕಿ ಜನಾಂಗದವರೆಂದು ನೀಡಿರುವ ಹೇಳಿಕೆ ಐತಿಹಾಸಿಕ, ವಾಸ್ತವತೆಗೆ ವಿರುದ್ಧವಾಗಿದೆ.
ನಮ್ಮ ಸಂಘವು ಇವರ ಹೇಳಿಕೆಯನ್ನು ಖಂಡಿಸುತ್ತದೆ. ಇವರ ಹೇಳಿಕೆಯಿಂದ ತುಂಬಾ ಅನೂನ್ಯವಾಗಿರುವ ಕುರುಬ ಮತ್ತು ವಾಲ್ಮೀಕಿ ಸಮಾಜಗಳ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಪ್ರಯತ್ನವಾಗಿರುತ್ತದೆ. ಆದ್ದರಿಂದ ಜಂಬಯ್ಯನಾಯ್ಕ ಅವರು ಕೂಡಲೇ ಅವರ ಈ ಹೇಳಿಕೆಯನ್ನು ವಾಪಸ್ಸು ಪಡೆಯಬೇಕೆಂದು ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.