
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಮಾ8: ರಂಗು ರಂಗಿನ ವರ್ಣರಂಜಿತ ಬಣ್ಣದ ಹಬ್ಬವನ್ನು ಹಂಪಿ, ವಿಜಯನಗರ ಜಿಲ್ಲೆಯ ಹೊಸಪೇಟೆ ಸೇರಿದಂತೆ ಜಿಲ್ಲೆಯಾದ್ಯಂತ ಸಂಭ್ರಮದ ಆಚರಣೆ ಮಾಡಲಾಯಿತು.
ಐತಿಹಾಸಿಕ ಹಂಪಿಯು ಕಾಮದಹನ ಹಾಗೂ ಬಣ್ಣದ ಹಬ್ಬ ಹೋಳಿಗೆ ಮೂಲಕೇಂದ್ರವಾದ ಹಿನ್ನೆಲೆಯಲ್ಲಿ ದೇಶ ವಿದೇಶಗಳಿಂದ ಅನೇಕರು ಬಂದು ಬಣ್ಣದಾಟವನ್ನು ಆಡುವುದು ವಾಡಿಕೆಯಾಗಿದೆ ಕಳೆದ ಮೂರು ನಾಲ್ಕ ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಹಬ್ಬ ಕಳೆದ ಬಾರಿ ನಡೆಯಿತಾದರೂ ಅಂತಹ ಉತ್ಸಾಹ ತುಂಬಿರಲಿಲ್ಲಾ, ಈ ಬಾರಿ ಸ್ಥಳೀಯರು ಸೇರಿದಂತೆ ವಿದೇಶಗರು ಚಿತ್ರಾಕರ್ಷಕ ಬಣ್ಣಗಳೊಂದಿಗೆ ಹೋಳಿ ಹಬ್ಬವನ್ನು ಸಂಭ್ರಮಿಸುತ್ತಿದ್ದಾರೆ.
ಅಂತಯೇ ವಿಜಯನಗರದ ಜಿಲ್ಲಾ ಕೇಂದ್ರವಾದ ಹೊಸಪೇಟೆಯ ಹಾಗೂ ಜಿಲ್ಲೆಯಾದ್ಯಂತ ಹೋಳಿ ಸಂಭ್ರಮ ಮನೆಮಾಡಿದ್ದು ಬೆಳಗಿನಿಂದಲೇ ಮಕ್ಕಳು, ಮಹಿಳೆಯರು ಹಾಗೂ ಯುವಕರು ಹೋಳಿ ಸಂಭ್ರಮದಲ್ಲಿ ಮುಳಗಿದ್ದರು. ನಗರದ ಎಲ್ಲಾ ಬಹುತೇಕ ಬೀದಿಗಳಲ್ಲಿ ತಂಡೋಪತಂಡವಾಗಿ ಹೋಳಿ ಸಂಭ್ರಮಾಚರಣೆಯಲ್ಲಿ ತೊಡಗಿರುವುದು ಒಂದಡೆಯಾದರೆ, ಅನೇಕರು ಮಹಿಳೆ ಹಾಗೂ ಪುರುಷರಿಗೆ ಪ್ರತೇಕ ಹೋಳಿ ಆಚರಣೆಗಳಿಗೆ ವ್ಯವಸ್ಥೆ ಮಾಡುವ ಮೂಲಕ ಸಂಭ್ರಮಕ್ಕೆ ಕಳೆ ನೀಡಿದ್ದರು.
ಪತಂಜಲಿಯಿಂದ ಅರ್ಥ ಪೂರ್ಣ ಹೋಳಿ
ಪತಂಜಲಿ ಯೋಗಸಮಿತಿ ನಗರದ ವಿವಿಧ ಪಾರ್ಕ್‍ಗಳಲ್ಲಿ ನಿತ್ಯವೂ ಯೋಗಸಾಧನೆ ಮಾಡುವ ಮೂಲಕ ಮನೆ ಮಾತಾಗಿರುವುದು ಒಂದಡೆಯಾದರೆ, ಇಂದು ಹೋಳಿ ಸಂಭ್ರಮವನ್ನು ಸ್ಥಳೀಯ ನೆಹರೂ ಕಾಲೋನಿಯ ಬಲ್ಡೋಟಾ ಉದ್ಯಾನವನದಲ್ಲಿ ಎಲ್ಲಾ ಕೇಂದ್ರಗಳ ಸಾಧಕರು ಹಾಗೂ ಯೋಗಾಶಕ್ತರಿಗೆ ಪುಷ್ಪವೃಷ್ಟಿ ಹಾಗೂ ನೈಸರ್ಗಿಕ ಬಣ್ಣಗಳ ಲೇಪಿಸುವ ಮೂಲಕ ಅರ್ಥಪೂರ್ಣ ರಂಗಿನಾಟಕ್ಕೆ ಚಾಲನೆ ನೀಡಿದರು.
ರಾಜ್ಯ ಪ್ರಭಾರಿ ಭವರ್‍ಲಾಲ್ ಆರ್ಯ, ಹಿರಿಯ ಸಾಧಕ ಕಿರಣ್, ಡಾ.ಎಫ್.ಟಿ.ಹಳ್ಳಿಕೇರಿ, ಅಶೋಕ ಚಿತ್ರಗಾರ, ದ್ರಾಕ್ಷಾಯಿಣಿ, ರೇಣುಕಾ, ಪ್ರಕಾಶ ಕುಲಕರ್ಣಿ, ಪ್ರಮಿಳಮ್ಮ, ಚಂದ್ರಿಕಾ ಶ್ರೀರಾಮ, ಯರ್ರಿಯಪ್ಪ ಸೇರಿದಂತೆ ಎಲ್ಲಾ ಕೇಂದ್ರಗಳ ಉಸ್ತೂವಾರಿಗಳು ಹಿರಿಯರು ಮಹಿಳೆಯರು ಮಕ್ಕಳು ಪಾಲ್ಗೊಂಡು ಮಹಿಳೆಯರಿಗೆ ಪುಪ್ಪಧಾರೆ ಸುರಿಸುವ ಮೂಲಕ ವಿಶ್ವ ಮಹಿಳಾ ದಿನಾಚರಣೆ, ಹೋಳಿ ಹಬ್ಬಕ್ಕೆ ಚಾಲನೆ ನೀಡಿದರು. ರಂಗದೇ ಬಸಂತಿ, ಹೋಳಿ ಆಯಿರೇ ಹೋಳಿ, ಬಣ್ಣ ನಮ ವಲವಿನ ಬಣ್ಣ ಎಂಬಿತ್ಯಾಧಿ ಹಾಡುಗಳಿಗೆ ನೃತ್ಯವನ್ನು ಮಾಡುವ ಮೂಲಕ ಪರಿವಾರದ ಎಲ್ಲರೂ ಕುಣಿದು ಕುಪ್ಪಳಿಸಿ ಪರಸ್ಪರ ಬಣ್ಣವನ್ನು ಹಚ್ಚುವ ಮೂಲಕ ಹೋಳಿ ಸಂಭ್ರಮಕ್ಕೆ ಸಾಕ್ಷಿಯಾದರು.
ಜಿಲ್ಲೆಯಾದ್ಯಂತವೂ ಹೋಳಿ ಹಬ್ಬದ ಸಂಭ್ರಮ ರಂಗೇರುತ್ತಿದ್ದು ಈ ಬಾರಿ ಜಿಲ್ಲೆಯಾದ್ಯಂತ ಸಾರ್ವಜನಿಕರು ಮೈಚಳಿ ಬಿಟ್ಟು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದರು. ಬೆಳಗಿನ ಮಾಹಿತಿಯಂತೆ ಜಿಲ್ಲೆಯಾದ್ಯಂತ ಶಾಂತಿಯುತವಾಗಿ ಸಂಭ್ರಮ ಆರಂಭವಾಗಿದೆ ಎಂದು ಪೋಲಿಸ್ ಮೂಲಕಗಳು ತಿಳಿಸಿವೆ.