ಹಂಪಿ ವಿವಿಯಲ್ಲಿ “ವ್ಯಾಖ್ಯಾನ” ವಿಶೇಷ ಉಪನ್ಯಾಸ

????????????????????????????????????


ಸಂಜೆವಾಣಿ ವಾರ್ತೆ
ಹೊಸಪೇಟೆ ನ8: ‘ಪ್ರಕೃತಿಯಲ್ಲಿ ಲೈಂಗಿಕತೆ, ಆಕರ್ಷಣೆ ಗಂಡು-ಹೆಣ್ಣು ಎಂಬುದರ ಮೇಲೆ ನಿರ್ಧಾರವಾದರೆ, ಸಾಂಸ್ಕೃತಿಕ ವ್ಯವಸ್ಥೆಯಲ್ಲಿ ಭಾವನಾತ್ಮಕ ರಕ್ತ ಸಂಬಂಧಗಳ ಮೇಲೆ ಲೈಂಗಿಕತೆ ಮತ್ತು ಆಕರ್ಷಣೆ ನಿರ್ಧಾರವಾಗುತ್ತದೆ’ ಎಂದು ಸಂಶೋಧಕ ಸೈಯದ್ ಬಿ. ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ “ವ್ಯಾಖ್ಯಾನ” ಸಂಶೋಧನ ವಿದ್ಯಾರ್ಥಿಗಳ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನುಷ್ಯ ನಿರ್ಮಿಸಿಕೊಂಡಿರುವ ವ್ಯವಸ್ಥೆಯಲ್ಲಿ ಅಲ್ಪಸಲ್ಪ ಮಾರ್ಪಾಡುಗಳಾದರೂ ಅದು ಮಾನಸಿಕ ಸಂಘರ್ಷಕ್ಕೆ ಏಡೆ ಮಾಡಿಕೊಡುತ್ತದೆ. ಅದಕ್ಕೆ ‘ಒಂದು ಮಲಿನ ಚಾದರ’ ಕಾದಂಬರಿಯಲ್ಲಿನ ವಿಧವೆಯೊಬ್ಬಳು ಮಗನಂತೆ ಸಾಕಿದವನೊಂದಿಗೆ ಸಂಪ್ರದಾಯದ ಒತ್ತಡದಿಂದ ಹೆಂಡತಿಯಾಗಿ ಅನುಭವಿಸುವ ಮಾನಸಿಕ ಸಂಘರ್ಷ ನಿದರ್ಶನವಾಗುತ್ತದೆ. ವಿಧವಾ ವಿವಾಹ ಸಮಾಜ ಮತ್ತು ಸಂಪ್ರದಾಯದ ಒತ್ತಡವಾಗದೇ ಅದು ಹೆಣ್ಣಿನ ಸ್ವತಂತ್ರ ಆಯ್ಕೆಯಾಗಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಸಂಶೋದಕಿ ನಾಯಕರ ಜಯಮ್ಮ  ಮಾತನಾಡಿದರು.
‘ವಿಧವೆಗೆ ಮರುವಿವಾಹವೇ ಪರಿಹಾರವಾಗಲಾರದು ಎಂಬುದನ್ನು ‘ಒಂದು ಮಲಿನ ಚಾದರ’ ಕಾದಂಬರಿ ನಿರೂಪಿಸುತ್ತದೆ’ ಎಂದು ಅಭಿಪ್ರಾಯಿಸಿದರು.
ವಿಭಾಗದ ಮುಖ್ಯಸ್ಥ ಡಾ. ಎ. ಮೋಹನ ಕುಂಟಾರ್, ಸಂಚಾಲಕ ರೆಬೆಕ್ಕ ಉಪಸ್ಥಿತರಿದ್ದರು. ವೇದಿಕೆ ಸಂಚಾಲಕರಾದ ಕೆ. ಅನಂತ ಮಾತನಾಡಿದರು. ಸಂಗೀತ ವಿಭಾಗದ ಜ್ಯೋತಿ ಪ್ರಾರ್ಥಸಿದರು.
ವಿನೀತಾ ಜೆ.ಎಂ ಸ್ವಾಗತಿಸಿದರು. ಶ್ವೇತಾ ಬಾಳಿ ಅವರು ವಂದಿಸಿದರು. ಶಶಿಕುಮಾರ ಕೆ. ನಿರೂಪಿಸಿದರು.