ಹಂಪಿ ಬೈ ನೈಟ್‌ : ಪುಳಕಿತರಾದ ಪ್ರವಾಸಿಗರು


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ, ಡಿ.25 : ವಿಶ್ವ ಪಾರಂಪರಿಕ ತಾಣ ಹಂಪಿಯನ್ನು ಹಗಲು ಹೊತ್ತಲ್ಲಿ ನೋಡುವುದಕ್ಕಿಂತ ರಾತ್ರಿ ದೀಪದ ಬೆಳಕಿನಲ್ಲಿಯೂ  ನೋಡಬಹುದು.  ಹಂಪಿಯ ಇತಿಹಾಸವನ್ನು ಪ್ರವಾಸಿಗರಿಗೆ ತಿಳಿಸುವ ‘ಹಂಪಿ ಬೈ ನೈಟ್‌’ ಕಾರ್ಯಕ್ರಮವನ್ನು ಭಾನುವಾರ ರಾತ್ರಿ ಸವಿದ ನೂರಾರು ಪ್ರವಾಸಿಗರು ಪುಳಕಿತರಾದರು.
ಹಂಪಿಯ ಎದುರು ಬಸವಣ್ಣ ಮಂಟಪ ದಿಂದ ಸಂಜೆ 7 ಗಂಟೆಗೆ ಆರಂಭವಾದ ಧ್ವನಿ ಬೆಳಕಿನ ಸಂಯೋಜನೆಯ ಕಾರ್ಯಕ್ರಮ, ರಾತ್ರಿ 8.15ರ ಸುಮಾರಿಗೆ ವಿರೂಪಾಕ್ಷ ದೇವಸ್ಥಾನದ ಬೃಹತ್ ಗೋಪುರದ ಸಮೀಪ ಇದೀಗ ಪ್ರಾಯೋಗಿಕವಾಗಿ ಆರಂಭವಾಗಿದ್ದು ಪ್ರವಾಸಿಗರ ಮನಗೆಲ್ಲುವಲ್ಲಿ ಸದ್ಯ ಯಶಸ್ವಿಯಾಗಿದೆ.
‘ಹಂಪಿಯ ಕಲ್ಲುಬಂಡೆಗಳು, ಸಾಲು ಮಂಟಪಗಳ ಆಕರ್ಷಣೆ ವಿಶ್ವವಿಖ್ಯಾತವಾಗಿದ್ದು. ಹೀಗಾಗಿ ಈ ಸ್ಮಾರಕಗಳ ಮೇಲೆ ಬೆಳಕಿನ ಸಿಂಚಲನದೊಂದಿಗೆ  ಇತಿಹಾಸ ತಿಳಿಸುವ ಪರಿಕಲ್ಪನೆಯ ಧ್ವನಿ ಬೆಳಕಿನ ಕಾರ್ಯಕ್ರಮ ‘ಹಂಪಿ ಬೈ ನೈಟ್‌’ ಬಹುದಿನಗಳ ಕನಸು ಸಾಕಾರಗೊಂಡಂತಾಗಿ
ಪ್ರವಾಸಿಗರು ಸಂಭ್ರಮಸತೊಡಗಿದ್ದಾರೆ. ಸದ್ಯ ಒಬ್ಬರಿಗೆ  500 ದರ ನಿಗದಿಪಡಿಸಲಾಗಿದೆ. ಇದಕ್ಕಾಗಿ ಪ್ರತ್ಯೇಕ ಕೌಂಟರ್ ಇದೆ. ಮುಂದಿನ ದಿನಗಳಲ್ಲಿ ಇದನ್ನು ಇನ್ನಷ್ಟು ಸ್ಥಳಗಳಿಗೆ ವಿಸ್ತರಿಸುವ ಯೋಜನೆ ಇದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಪ್ರಭುಲಿಂಗ ತಳಕೇರಿ ತಿಳಿಸಿದರು.
ಬೆಂಗಳೂರಿನ ಇನೋವೇಟಿವ್ ಲೈಟ್ ಸಿಸ್ಟಮ್‌ ಕಾರ್ಪೊರೇಷನ್ ಸಂಸ್ಥೆ ಗುತ್ತಿಗೆ ಪಡೆದು ಈ ಕಾರ್ಯಕ್ರಮ ನಡೆಸುತ್ತಿದ್ದು, ಸುಮಾರು ಒಂದೂವರೆ ತಿಂಗಳಿಂದ ಇದು ಚಾಲನೆಯಲ್ಲಿದೆ. ಕ್ರಿಸ್ಮಸ್‌ ರಜೆ ಹಿನ್ನೆಲೆಯಲ್ಲಿ ಹಂಪಿಗೆ ಭಾರಿ ಸಂಖ್ಯೆಯಲ್ಲಿ ಪ್ರವಾಸಿಗರು ಬಂದಿರುವ ಕಾರಣ ದೊಡ್ಡ ಸಂಖ್ಯೆಯಲ್ಲಿ ಪ್ರವಾಸಿಗರು ಇದಕ್ಕೆ ಮನಸೋತಿದ್ದಾರೆ. 
‘ಸದ್ಯ ವಿರೂಪಾಕ್ಷ ದೇವಸ್ಥಾನದ ರಥಬೀದಿಯಲ್ಲಿ ಹಂಪಿ ಬೈ ನೈಟ್‌ ಏರ್ಪಡಿಸಲಾಗಿದೆ. ಮುಂದೆ ಸಂಜೆ 6.30ರಿಂದ ರಾತ್ರಿ 9ರವರೆಗೆ ಈ ಕಾರ್ಯಕ್ರಮ ನಡೆಯಲಿದೆ
–ಪ್ರಭುಲಿಂಗ ತಳಕೇರಿ, ಉಪನಿರ್ದೇಶಕ, ಪ್ರವಾಸೋದ್ಯಮ ಇಲಾಖೆ