ಹಂಪಿ ನಿವಾಸಿಗಳಿಂದ ಕೊಟ್ಟೂರುಸ್ವಾಮಿಗಳ ಭೇಟಿ


ಸಂಜೆವಾಣಿ ವಾರ್ತೆ
ಹೊಸಪೇಟೆ ಆ, 27: ವಿಶ್ವಪಾರಂಪರಿಕ ತಾಣ ಹಂಪಿಯಲ್ಲಿ ನಡೆಯುತ್ತಿರುವ ವಿವಿಧ ವಾಣಿಜ್ಯ ಚಟುವಟಿಕೆಗಳಿಗೆ ಸಂಬಂದಿಸಿ ಹೈಕೋರ್ಟ್ನಲ್ಲಿ ನಡೆಯುತ್ತಿರುವ ನ್ಯಾಯಾಂಗ ನಿಂಧನೆ ಅರ್ಜಿ ವಿಚಾರಣೆ ಅಂತಿಮಘಟಕ್ಕೆ ತಲುಪುತ್ತಿರುವ ಸಂದರ್ಭದಲ್ಲಿ ಅರ್ಜಿದಾರರಾದ ಕೊಟ್ಟೂರುಸಂಸ್ಥಾನ ಮಠದ .ಬಸವಲಿಂಗ ಸ್ವಾಮೀಜಿ ಶನಿವಾರ ಹಂಪಿಗೆ ಭೇಟಿ ನೀಡಿರುವುದು ಭಾರಿ ಮಹತ್ವ ಪಡೆದಿದೆ.
ಶನಿವಾರ ಸಂಜೆ ಹಂಪಿಯಲ್ಲಿರುವ ಕೊಟ್ಟೂರು ಸ್ವಾಮಿ ಶಾಖಾ ಶ್ರೀಮಠಕ್ಕೆ ಭೇಟಿ ನೀಡಿದ ಕೊಟ್ಟೂರು ಶ್ರೀಗಳು ಸ್ಥಳೀಯ ಭಕ್ತರು ಹಾಗೂ ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸಿದರು. ಬಳಿಕ ಆಶೀರ್ವಚನ ನೀಡಿದ ಜ.ಕೊಟ್ಟೂರು ಬಸವಲಿಂಗ ಸ್ವಾಮೀಜಿ, ಲಿಂ. ಜಗದ್ಗುರು ಡಾ.ಸಂಗನಬಸವ ಮಹಾಸ್ವಮೀಜಿ ಅವರು ಜೀವಿತ ಕಾಲದಲ್ಲಿ ಹಂಪಿ ಅಭಿವೃದ್ಧಿಯಾಗಬೇಕು. ದಕ್ಷಿಣ ಕಾಶಿ ಎಂದು ಹೆಸರಾಗಿರುವ ಹಂಪಾ ವಿರೂಪಾಕ್ಷನ ಕ್ಷೇತ್ರದ ಪುಣ್ಯ ನೆಲೆದಲ್ಲಿ ಯಾವುದೇ ರೀತಿಯ ಅನೈತಿಕ ಚಟುವಟಿಕೆಗಳು ನಡೆಯಬಾರದು. ನಮ್ಮ ಸಂಸ್ಕೃತಿ, ಧರ್ಮ ಉಳಿಯಬೇಕು ಎಂಬುದಷ್ಟೇ ಲಿಂ.ಡಾ.ಸಂಬಸವ ಶ್ರೀಗಳ ಆಶಯವಾಗಿತ್ತು. ಆದರೆ, ಸ್ಥಳೀಯರನ್ನು ಒಕ್ಕಲೆಬ್ಬಿಸುವ ಎಳ್ಳಷ್ಟೂ ವಿಚಾರವಿರಲಿಲ್ಲ.
ಅದರಂತೆ ದಶಕದ ಹಿಂದೆಯೇ ಇಲ್ಲಿನ ರಥ ಬೀದಿಯಲ್ಲಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ಮಾದಕ ವಸ್ತುಗಳ ಬಳಕೆಗೆ ಪೊಲೀಸರು ಕಡಿವಾಣ ಹಾಕಿದ್ದಾರೆ. ಸದ್ಯಕ್ಕೆ ಅಂತಹ ಅಕ್ರಮ, ಅನೈತಿಕ ಚಟುವಟಿಕೆಗಳು ನಡೆಯುತ್ತಿಲ್ಲ. ಅಲ್ಲದೇ, ಪೂಜ್ಯರು ಲಿಂಗೈಕ್ಯರಾದ ಬಳಿಕ ಮುಂದಿನ ಕಾನೂನು ಹೋರಾಟಕ್ಕೆ ಸಂಬಂಧಿಸಿ ನನ್ನ ಅನುಮತಿ ಪಡೆದಿಲ್ಲ. ನನ್ನ ಗಮನಕ್ಕಿಲ್ಲದೆಯೇ ಕಾನೂನು ಪ್ರಕ್ರಿಯೆಗಳು ನಡೆದಿವೆ. ಪರಿಣಾಮ ಈ ಭಾಗದ ಹತ್ತಾರು ಹಳ್ಳಿಗಳ ಜನರು ಸಮಸ್ಯೆ ಎದುರಿಸುವಂತಾಗಿದೆ. ಸದ್ಯಕ್ಕೆ ಹಂಪಿ ಜನರ ನೆಲೆಯ ವಿಚಾರ ಕೋರ್ಟ್ನಲ್ಲಿರುವುದರಿಂದ ಈ ಬಗ್ಗೆ ನಮ್ಮ ವಕೀಲರಲ್ಲಿ ಚರ್ಚಿಸುತ್ತೇನೆ. ಆದರೆ, ಸ್ಥಳೀಯರನ್ನು ಒಕ್ಕಲೆಬ್ಬಿಸುವ ದುರುದ್ದೇಶವಿಲ್ಲ. ಶ್ರೀಮಠ ಎಂದಿಗೂ ಜನ ಸಾಮಾನ್ಯರ ಪರವಾಗಿ ನಿಲ್ಲಲಿದೆ ಎಂದು ಧೈರ್ಯ ತುಂಬಿದರು.
ಅದಕ್ಕೂ ಮುನ್ನ ಮಾತನಾಡಿದ ಹಂಪಿಯ ಅರ್ಚಕ ಮೋಹನ್ ಚಿಕ್‌ಭಟ್ ಜೋಶಿ, ಕಳೆದ ೩೦ ವರ್ಷಗಳಿಂದ ಪ್ರವಾಸೋದ್ಯಮವೇ ಸ್ಥಳೀಯರ ಜೀವಾಳವಾಗಿದೆ. ಆದರೆ, ಅಕ್ರಮ, ಅನೈತಿಕ ಚಟುವಟಿಕೆಗಳ ನೆಪದಲ್ಲಿ, ಎಲ್ಲ ರೀತಿಯ ವಾಣಿಜ್ಯ ಚಟುಕವಟಿಕೆಗಳನ್ನು ಸ್ಥಗಿತಗೊಳಿಸಿದೆ. ಅಕ್ರಮ ಹೋಂ ಸ್ಟೇ ಗಳ ನೆಪದಲ್ಲಿ ಮನೆಗಳಿಗೂ ವಿದ್ಯುತ್ ಕಡಿತಗೊಳಿಸಿದೆ. ಮನೆಯ ಸಿಂಟೆಕ್ಸ್ಗೆ ನೀರು ತುಂಬಲು ಸಾಧ್ಯವಾಗುತ್ತಿಲ್ಲ. ಇಲ್ಲಿನ ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ಬೀದಿ ದೀಪದ ಕೆಳಗೆ ಅಭ್ಯಾಸ ಮಾಡುವಂತಾಗಿದೆ ಎಂದು ಸ್ಥಳೀಯ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಕಾಂಗ್ರೆಸ್ ಮುಖಂಡ ದೀಪಕ್ ಸಿಂಗ್, ಎಚ್.ಎನ್.ಎಫ್.ಇಮಾಮ್ ನಿಯಾಜಿ ಸ್ಥಳೀಯರ ಪರವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷೆ ರಜನಿ, ಗ್ರಾ.ಪಂ. ಮಾಜಿ ಅಧ್ಯಕ್ಷ ಎಂ.ಗೋವಿಂದ, ಹಂಪಿ ಹಿತರಕ್ಷಣಾ ಸಮಿತಿ ಅಧ್ಯಕ್ಷ ಕಿರಣ್ ಕುಮಾರ, ಎಂ.ವಿರೂಪಾಕ್ಷಿ, ಪ್ರವಾಸಿ ಮಾರ್ಗದರ್ಶಿ ವಿರೂಪಾಕ್ಷಿ ಮತ್ತಿತರರು ಇದ್ದರು.

One attachment • Scanned by Gmail