ಹಂಪಿ ಕನ್ನಡ ವಿವಿ ಘಟಿಕೋತ್ಸವ ನಾಡೋಜ ಪದವಿ ಪ್ರಧಾನ

ಬಳ್ಳಾರಿ ನ 10 : ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯದ 28ನೇ ನುಡಿಹಬ್ಬ (ಘಟಿಕೋತ್ಸವ) ಇಂದು ನಡೆಯಿತು.
ವಿಶ್ವ ವಿದ್ಯಾಲಯದ ಮಂಟಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರ ಅನುಪಸ್ಥಿತಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ವೈದ್ಯಕೀಯ ಕ್ಷೇತ್ರದಲ್ಲಿನ ಸೇವೆಗಾಗಿ
ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಡಾ. ಹಣಮಂತ ಗೋವಿಂದಪ್ಪ ದಡ್ಡಿ ಅವರಿಗೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿನ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಬೆಂಗಳೂರಿನ ಶೇಷಾದ್ರಿಪುರಂ ಶಿಕ್ಷಣ ಸಂಸ್ಥೆಯ ಡಾ. ವೂಡೇ ಕೃಷ್ಣ ಅವರಿಗೆ ನಾಡೋಜ ಪದವಿ ನೀಡಿ ಗೌರವಿಸಿದರು.
ಅಲ್ಲದೆ ಅವರು ಇದೇ ಸಂದರ್ಭದಲ್ಲಿ ಡಿಲಿಟ್. ಮತ್ತು ಪಿಎಚ್.ಡಿ ಪದವಿ ಪ್ರದಾನ ಮಾಡಿದರು.
ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್) ನಿರ್ದೇಶಕ ಪ್ರೊ.ಎಸ್.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಿ
ಕನ್ನಡ ಕಮನೀಯವಾದ ಭಾಷೆ ಎಂಬುದಕ್ಕೆ ಇದುವೇ ಸಾಕ್ಷಿ. ಇನ್ನು ನಮ್ಮ ಜನಪದರ ಜ್ಞಾನ ಎಲ್ಲ ಸಾಕ್ಷರ ಜ್ಞಾನಕ್ಕಿಂತ ಮಿಗಿಲು ಎಂದರು.
ಶರಣ ಸಂಸ್ಕಾರ, ನನ್ನ ಅಭಿಪ್ರಾಯದಲ್ಲಿ ಅದು ಧರೆಗೆ ಅವತರಿಸಿದ ‘ಕಾಯಕ-ದಾಸೋಹ’ ಎಂಬ ಅವಳಿ ಸಿದ್ಧಾಂತಗಳು ಇಂದಿನ ಅರ್ಥಶಾಸ್ತ್ರಜ್ಞರಿಗೂ ಸವಾಲಾಗುವಂತಹ, ಜಿಜ್ಞಾಸೆ ತರುವಂತಹ ಆರ್ಥಿಕ ಸಿದ್ಧಾಂತ ಜಗತ್ತಿನ ಯಾವ ಮೂಲೆಯಲ್ಲಿಯೂ ಆವಿರ್ಭವಿಸದೆ ಇಲ್ಲಿನ ಸೊಗಡಿನಲ್ಲಿ ಅಡಗಿತ್ತು ಎಂದರೆ ಉತ್ಪ್ರೇಕ್ಷೆಯಲ್ಲ ಎಂದರು.
ನಮ್ಮ ಸನಾತನ ಧರ್ಮದ ವ್ಯುತ್ಪತ್ತಿಯಾದ ಸಂಸ್ಕಾರ-ಸಂಹಿತೆಗಳು, ಕಲಿಕಾ ವಿಧಿ-ವಿಧಾನಗಳು ಹಾಗೂ ಗುರುಕುಲ ಪದ್ಧತಿಯ ವಿದ್ಯಾಕೇಂದ್ರಗಳು ವಿದ್ಯಾರ್ಥಿಗಳಲ್ಲಿ ಮೊದಲು ಕಲಿಸುತ್ತಿದ್ದದ್ದು, ವಿನಯಶೀಲತೆ ಹಾಗೂ ವಿಧೇಯತೆ ಇರುತ್ತಿತ್ತು. ಅದು ಈಗ ಕಡಿಮೆಯಾಗಿದೆಂದರು.
ಯುವಸಮೂಹಕ್ಕೆ, ನಾಳಿನ ನಾಯಕರುಗಳಿಗೆ, ಅವರ ಸಾಧನೆ-ಪರಿಶ್ರಮಕ್ಕೆ ಅಭಿನಂದಿಸುತ್ತಾ, ಭಾರತೀಯತೆಯ ಚೇತನ ಮತ್ತು ಆದರ್ಶಗಳನ್ನು ಗೌರವಿಸುತ್ತಾ ಅದನ್ನು ಜೀವನದಲ್ಲಿ ಅನುಶೀಲನವಾಗಿ ಅಳವಡಿಸಿಕೊಳ್ಳುವಂತೆ ವಿನಂತಿಸುತ್ತೇನೆ. ಏಕೆಂದರೆ ನೀವುಗಳು ನಾಳಿನ ನೇತಾರರು ಮಾತ್ರವಲ್ಲ, ಇಂದಿನ ರೂವಾರಿಗಳು. ನೀವು ಬದಲಾವಣೆ ಹರಿಕಾರರಾಗುವ ಮೂಲಕ ರಾಷ್ಟ್ರದ ಪ್ರಗತಿಗೆ ಕಾರಣರಾಗಬಲ್ಲಿರಿ ಎಂದರು.
ವಿಶ್ವ ವಿದ್ಯಾಲಯದ ಕುಲಪತಿ ಸ.ಚಿ.ರಮೇಶ್ ಅವರು ಸ್ವಾಗತ ಭಾಷಣ ಮಾಡಿ ಕನ್ನಡ ವಿವಿಯ ಡಾ ರಾಜಕುಮಾರ ಅಧ್ಯಯನ ಪೀಠವನ್ನು ಸಿನಿಮಾ ಅಧ್ಯಯನ ಕೇಂದ್ರವಾಗಿ ಅಭಿವೃದ್ಧಿ ‌ಪಡಿಸಿದೆ. ವಿಶ್ವದ ಇತರೇ ಭಾಷೆಗಳಲ್ಲಿನ ಜ್ಞಾನವನ್ನು ಕನ್ನಡಕ್ಜೆ ತರುವ ಕೆಲಸ ನಿರಂತರವಾಗಿ‌ ನಡೆಯುತ್ತಿದೆ ಎಂದ ಅವರು‌ ಸರ್ಕಾರ ಕನ್ನಡದ ವಿವಿಧ ನೆಲಡಗಳ ಅಧಗಯನಕ್ಕೆ ಮತ್ತಷ್ಟು ಅನುದಾನ ನೀಡಬೇಕು ಎಂದರು
ಕೋವಿಡ್19 ಕಾರಣಕ್ಕಾಗಿ ಈ ವರ್ಷ ಸೀಮಿತ ಸಂಖ್ಯೆಯ ಜನರೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.