ಹಂಪಿ ಕನ್ನಡ ವಿವಿಯ ನಾಡೋಜ ಪದವಿಗೆ ಹಣಮಂತ ದಡ್ಡಿ, ವೂಡೇ ಕೃಷ್ಣ ಆಯ್ಕೆ

ಬಳ್ಳಾರಿ ನ 02 : ಜಿಲ್ಲೆಯ ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರತಿ ವರ್ಷ ತನ್ನ‌ನುಡಿ ಹಬ್ಬ (ಘಟಿಕೋತ್ಸವ) ಸಂದರ್ಭದಲ್ಲಿ ನೀಡುವ ನಾಡೋಜ ಪದವಿಗೆ ಈ ವರ್ಷ ಡಾ. ಹಣಮಂತ ಗೋವಿಂದಪ್ಪ ದಡ್ಡಿ ಮತ್ತು ವೂಡೇ ಪಿ. ಕೃಷ್ಣ ಅವರನ್ನು ಆಯ್ಕೆ ಮಾಡಿದ್ದು. ಈ ತಿಂಗಳ 10 ರಂದು‌ ಹಮ್ಮಿಕೊಂಡಿರುವ

ವಿವಿಯ 28ನೇ ನುಡಿಹಬ್ಬದಂದು ಈ‌ ಈ ಗೌರವ ಪದವಿಯನ್ನು ಪ್ರಧಾನ ಮಾಡಲಿದೆಂದು ವಿವಿಯ ಪ್ರಕಟಣೆ ತಿಳಿಸಿದೆ.
ಜಮಖಂಡಿಯ ಹಣಮಂತ ಗೋವಿಂದಪ್ಪ ದಡ್ಡಿ ಅವರಿಗೆ ವೈದ್ಯಕೀಯ ಕ್ಷೇತ್ರ ಮತ್ತು ಬೆಂಗಳೂರಿನ ವೂಡೇ ಕೃಷ್ಣ ಅವರಿಗೆ ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ನಾಡೋಜ ಪದವಿ ಗೌರವಕ್ಕೆ ಆಯ್ಕೆ ಮಾಡಲಾಗಿದೆ.

ನ 10 ರಂದು ವಿವಿಯಯಲ್ಲಿ ಬೆಳಿಗ್ಗೆ 11ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ನಾಡೋಜ‌ಪದವಿ ನೀಡಿ ಗೌರವಿಸಲಿದ್ದಾರೆ.
ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಪಿಎಚ್‌.ಡಿ ಮತ್ತು ಡಿ.ಲಿಟ್‌ ಪದವಿ ಪ್ರದಾನ ಮಾಡುವರು. ರಾಷ್ಟ್ರೀಯ ಮೌಲ್ಯಾಂಕನ ಮತ್ತು ಮಾನ್ಯತಾ ಪರಿಷತ್ತಿನ (ನ್ಯಾಕ್‌) ನಿರ್ದೇಶಕ ಪ್ರೊ.ಎಸ್‌.ಸಿ. ಶರ್ಮಾ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.

ಕೋವಿಡ್‌–19 ಕಾರಣಕ್ಕಾಗಿ ಈ ವರ್ಷ ಸೀಮಿತ ಸಂಖ್ಯೆಯ ಜನರೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಬಯಲು ರಂಗಮಂದಿರದ ಬದಲು ಮಂಟಪ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಸಂಜೆಯ ಬದಲು ಬೆಳಿಗ್ಗೆ ಕಾರ್ಯಕ್ರಮಕ್ಕೆ ಏರ್ಪಾಡು ಮಾಡಲಾಗಿದೆ. ಬೋಧಕ–ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿಗಳು ಯೂಟ್ಯೂಬ್‌ನಲ್ಲಿ ಕಾರ್ಯಕ್ರಮ ವೀಕ್ಷಿಸಬೇಕೆಂದು ಕೋರಲಾಗಿದೆ.