ಹಂಪಿ ಉತ್ಸವ ಕಲಾವಿದರಿಗೆ ನೀಡಿದ ಚೆಕ್ ಬೌನ್ಸ್

ಬಳ್ಳಾರಿ: ವಿಶ್ವ ಪರಂಪರೆಯ ತಾಣ ಹಂಪಿಯಲ್ಲು ಈ ವರ್ಷ ಜನವರಿಯಲ್ಲಿ ನಡೆಸಿದ ಹಂಪಿ ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಕಲಾವಿದರಿಗೆ ನೀಡಿದ ಚೆಕ್ ಗಳು ಬೌನ್ಸ್ ಆಗಿವೆ. ಇದಕ್ಕಾಗಿ ಕಲಾವಿದರೊಬ್ಬರು ಕೋರ್ಟ್ ಮೆಟ್ಟಿಲೇರಿದ್ದಾರೆ.
ರಾಜ್ಯದ ಕಲಾವಿದರನ್ನು ಪೋಷಿಸಬೇಕಾದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಕಲಾವಿದರನ್ನು ಶೋಷಿಸುತ್ತದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಹಂಪಿಯಲ್ಲಿ ೨೦೨೨-೨೩ನೇ ಸಾಲಿನ ಹಂಪಿ ಉತ್ಸವವನ್ನು ಜ.೨೭ ರಿಂದ ಮೂರು ದಿನಗಳ ಕಾಲ ಹಮ್ಮಿಕೊಂಡಿತ್ತು. ನಾಲ್ಕು ವೇದಿಕೆಗಳಲ್ಲಿ ಕಾರ್ಯಕ್ರಮಗಳ ಪ್ರದರ್ಶನ ನಡೆಯಿತು. ಸಾವಿರಾರು ಕಲಾವಿದರು ಕಾರ್ಯಕ್ರಮಗಳ ಪ್ರದರ್ಶನ ನೀಡಿದ್ದರು.
ಉತ್ಸವ ಆಚರಣೆಗೆ ಸರ್ಕಾರ ೧೦ ಕೋಟಿ ರೂ ಬಿಡುಗಡೆ ಮಾಡಿದೆ, ಉದ್ದಿಮೆದಾರರಿಂದಲೂ ದೇಣಿಗೆ ಪಡೆದಿತ್ತು. ಉತ್ಸವದಲ್ಲಿ ಕಾರ್ಯಕ್ರಮ ನೀಡಿದ ಲಕ್ಷಾಂತರ ರೂ ಸಂಭಾವನೆ ಪಡೆಯುವ ಎಜೆನ್ಸಿಗಳ ಮೂಲಕ ಬುಕ್ ಆಗಿ ಬಂದ ಕಲಾವಿದರಿಗೆ ಈಗಾಗಲೇ ಸಂಭಾವನೆ ನೀಡಲಾಗಿದೆ.
ಆದರೆ ನೇರವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅನುಮತಿ ಪಡೆದು ಕಾರ್ಯಕ್ರಮ ನೀಡಿದ ರಾಜ್ಯದ ಕಡಿಮೆ ಅಂದರೆ ಸಾವಿರದ ಲೆಕ್ಕದಲ್ಲಿ ಸಂಭಾವನೆ ಪಡೆಯುವ ಕಲಾವಿದರಿಗೆ ನೀಡಿದ ಸಂಭಾವನೆಯ ಚೆಕ್‌ಗಳು ಮಾತ್ರ ಉತ್ಸವ ನಡೆದು ಐದು ತಿಂಗಳಾಗುತ್ತಾ ಬಂದರೂ ಖಾತೆಗೆ ಹಣ ಬಂದಿಲ್ಲ.
ಇದರಿಂದ ಕಲಾವಿದರ ಅಕೌಂಟ್‌ನಲ್ಲಿದ್ದ ಒಂದಿಷ್ಟು ಹಣ ಚೆಕ್ ಬೌನ್ಸ್ ಶುಲ್ಕವಾಗಿ ಕಡಿತಗೊಳ್ಳುತ್ತಿದೆ.
ಬೆಂಗಳೂರಿನ ಕಲಾವಿದ ನಾಗೇಶ್ ಕೆ.ಎನ್. ಮತ್ತವರ ತಂಡ ಹಂಪಿ ಉತ್ಸವದ ಎರಡನೇ ದಿನ ಜ. ೨೮ ರಂದು ಎದಿರು ಬಸವಣ್ಣ ವೇದಿಕೆಯಲ್ಲಿ ಸುಗುಮ ಸಂಗೀತ ಕಾರ್ಯಕ್ರಮ ನೀಡಿತ್ತು. ಒಂದೂವರೆ ಲಕ್ಷ ರೂ. ನೀಡುವುದಾಗಿ ಕರೆದು ೩೫ ಸಾವಿರ ರೂಗಳ ಚೆಕ್‌ನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಬಳ್ಳಾರಿಯ ಸಹಾಯಕ ನಿರ್ದೇಶಕರು ನೀಡಿ ಕಳಿಸಿದ್ದರಂತೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಚೆಕ್ ನಂ.೧೯೪೫೦೩ ನ್ನು ಎರಡು ಬಾರಿ ಬ್ಯಾಂಕಿಗೆ ಜಮೆ ಮಾಡಿದರೆ ಅಗತ್ಯವಾದಷ್ಟು ಮೊತ್ತ ಅಕೌಂಟ್‌ನಲ್ಲಿ ಇಲ್ಲ ಎಂದು ಬಂದಿದೆ ಎಂಬ ಮಾಹಿತಿ ಬಂದಿದೆ.
ಅದಕ್ಕಾಗಿ ಕಲಾವಿದ ನಾಗೇಶ್ ಅವರು ಬೆಂಗಳೂರಿನ ಮೆಟ್ರೊಪಾಲಿಟನ್ ಸಿಟಿ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಕೇಸನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರ ಮೇಲೆ ದಾಖಲಿಸಿದ್ದಾರೆ.