ಹಂಪಿ ಉತ್ಸವ ಆಚರಣೆ ದಿನಾಂಕ ಮುಂದೂಡಿಕೆ:


ಸಂಜೆವಾಣಿ ವಾರ್ತೆ
ಹೊಸಪೇಟೆ, ಸೆ.14: ಬರದ ನೆಪದಲ್ಲಿ ವಿಶ್ವವಿಖ್ಯಾತ ಹಂಪಿ ಉತ್ಸವವನ್ನು ಮುಂದೂಡಿರುವ ಸರ್ಕಾರದ ಕ್ರಮಕ್ಕೆ ವಿಜಯನಗರ ಜಿಲ್ಲೆಯಲ್ಲಿ ತ್ರೀವ ಅಸಮಾಧಾನ ವ್ಯಕ್ತವಾಗಿದ್ದು, ಮುಂದಿನ ಜನವರಿ, ಪೆಬ್ರವರಿ ತಿಂಗಳಲ್ಲಿಯೂ ಸಹ ಉತ್ಸವ ಆಚರಣೆ ಮಾಡುವುದು ಡೌಟ್ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಹೌದು!ಮೈಸೂರು ದಸರಾ ಉತ್ಸವಕ್ಕಿಲ್ಲದ ಬರ ಹಂಪಿ ಉತ್ಸವಕ್ಕೆ ಏಕೆ ಎಂಬ ಅಸಮಾಧಾನ ವ್ಯಕ್ತವಾಗಿದ್ದು, ಇದೇ ನವೆಂಬರ್ 3, 4 ಹಾಗೂ 5 ರಂದು ಉತ್ಸವ ಆಚರಿಸಬೇಕು. ಇದಕ್ಕಾಗಿ ಅಗತ್ಯ ಅನುದಾನ ಮೀಸಲಿಡಬೇಕು ಎಂಬ ಆಗ್ರಹ ಕೇಳಿ ಬಂದಿದೆ.
10 ದಿನಗಳ ಕಾಲ ನಡೆಸಿ:
10 ದಿನಗಳ ಕಾಲ ಮೈಸೂರು ದಸರಾ ಆಚರಿಸಿದಂತೆ ಹಂಪಿ ಉತ್ಸವವನ್ನು ಆಚರಿಸಬೇಕು. ಈ ಮೂಲಕ ವಿಜಯನಗರ ಸಾಮಾಜ್ರ್ಯದ ಶ್ರೀಮಂತ ಕಲೆ, ಸಾಹಿತ್ಯ, ಪರಂಪರೆಯನ್ನು ವಿಶ್ವಕ್ಕೆ ಪರಿಚಯಿಸಬೇಕಿದೆ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.
ಹಂಪಿ ಉತ್ಸವ ಆಚರಣೆಗೆ ಈ ಭಾಗದ ಜನರು ಪ್ರತಿವರ್ಷ ಆಗ್ರಹ ಪಡಿಸುವುದು. ಇದಕ್ಕೆ ಸರ್ಕಾರ ನಿರ್ಲಕ್ಷ್ಯವಹಿಸುವುದು ಸಾಮಾನ್ಯವಾಗಿದೆ. ಹಂಪಿ ಉತ್ಸವವನ್ನು ಮಾತ್ರವಲ್ಲ ಈ ಭಾಗದ ಕಲಾವಿದರನ್ನು ಕಡೆಗಣಿಸಲಾಗಿದೆ. ಯಾವುದೇ ಉತ್ಸವಗಳು, ಬೆಂಗಳೂರು ಮತ್ತು ಮೈಸೂರಿಗೆ ಸೀಮಿತಗೊಳಿಸಲಾಗಿದೆ. ಉತ್ತರ ಕರ್ನಾಟಕ ಭಾಗವನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಈ ಭಾಗದ ಜನರ ಒತ್ತಾಸೆ ಮೇರೆಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಗಮದ್ ಅವರು, ಇದೇ ನವಂಬರ್ ತಿಂಗಳಲ್ಲಿ ಹಂಪಿ ಉತ್ಸವ ಆಚರಣೆ ನಡೆಸಲಾಗುವುದು ಎಂದು ಭರವಸೆ ನೀಡಿ ದಿನಾಂಕ ನಿಗದಿಗೊಳಿಸಲಾಗಿತ್ತು. ಈಗ ಬರದ ನೆಪದಲ್ಲಿ ಹಂಪಿ ಉತ್ಸವ ಆಚರಣೆ ಮುಂದೂಡಿರುವುದು. ಈ ಭಾಗದ ಕಲಾವಿದರ ಬೇಸರಕ್ಕೆ ಕಾರಣವಾಗಿದೆ.
ವಿಜಯನಗರ ಅರಸರ ಕಾಲದಲ್ಲಿ ಆರಂಭಗೊಂಡ ವೈಭವದ ದಸರಾ ಉತ್ಸವ ಪರಂಪರೆ ವಿಜಯನಗರ ಸಾಮ್ರಾಜ್ಯ ಪಥನದ ಬಳಿಕ ಮೈಸೂರಿಗೆ ಹರಿದು ಹೋಯಿತು.
ಮೈಸೂರು ದಸರಾ ಉತ್ಸವ ಆಚರಣೆಗೆ ಈಗಾಗಲೇ ಸರ್ಕಾರ ಬರದ ಸಿದ್ದತೆ ನಡೆಸಿದೆ. ಆದರೆ, ಹಂಪಿ ಉತ್ಸವಕ್ಕೆ ಆಚರಣೆಗೆ ಏಕೆ ತಾರತ್ಯಮ ಮಾಡಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರು ಮತ್ತೊಮ್ಮೆ ಪರಿಶೀಲಿಸಿ, ನವೆಂಬರ್ ತಿಂಗಳಲ್ಲಿ ನಡೆಸಬೇಕು ಎಂದು ಈ ಭಾಗದ ಕಲಾಸಕ್ತರ ಒತ್ತಾಸೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಅವರ ಅಧ್ಯಕ್ಷತೆಯಲ್ಲಿ ಬೆಂಗಳೂರಿನಲ್ಲಿ ಬುಧವಾರ ನಡೆದ ಸಭೆಯಲ್ಲಿ ರಾಜ್ಯದಲ್ಲಿ ವಿಜಯನಗರ-ಬಳ್ಳಾರಿ ಸೇರಿದಂತೆ ಬಹುತೇಕ ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ತಾಲೂಕುಗಳಲ್ಲಿ ಬರ ಪರಿಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿಯಲ್ಲಿ ಉತ್ಸವ ನಡೆಸುವುದು ಕಷ್ಟ. ಫೆಬ್ರವರಿ ವೇಳೆಗೆ ಪರಿಸ್ಥಿತಿ ನೋಡಿಕೊಂಡು ಉತ್ಸವ ನಡೆಸುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಈ ಮುಂಚೆ ನವೆಂಬರ್‍ನಲ್ಲಿ ಉತ್ಸವ ನಡೆಸಲು ನಿರ್ಧಾರ ಮಾಡಲಾಗಿತ್ತು. ಆದರೆ ಬರ ಪರಿಸ್ಥಿತಿಯಿಂದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಲಹೆ ಮೇರೆಗೆ ಜನವರಿ ಅಥವಾ ಫೆಬ್ರವರಿಯಲ್ಲಿ ನಡೆಸಲು ತೀರ್ಮಾನಿಸಲಾಗಿದೆ.
ಜಮೀರ್ ಅಹಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ, ವಿಜಯನಗರ.
ಹಂಪಿ ಉತ್ಸವ ಮುಂದೂಡಿರುವುದಕ್ಕೆ ಖೇದ ಎನ್ನಿಸುತ್ತದೆ. ಮೈಸೂರು ದಸರಾ ಪ್ರೇರಣೆಯಾದ ಹಂಪಿ ಉತ್ಸವಕ್ಕೆ ಸರ್ಕಾರ ನಿರ್ಲಕ್ಷ್ಯ ವಹಿಸುವುದು ಸರಿಯಾದ ಕ್ರಮವಲ್ಲ. ನ 3,4 ಮತ್ತು 5 ರಂದು ಹಂಪಿ ಉತ್ಸವ ನಡೆಸಲು ಕ್ರಮ ಕೈಗೊಳ್ಳಬೇಕು.
ಮ.ಬ.ಸೋಮಣ್ಣ, ಹಿರಿಯ ರಂಗಕರ್ಮಿ. ಲಲಿತಕಲಾ ರಂಗ, ಮರಿಯಮ್ಮನಹಳ್ಳಿ.