ಹಂಪಿ ಉತ್ಸವದ ವೈಭವಕ್ಕೆ ಸಾಕ್ಷಿಯಾದ ಜಾನಪದ ವಾಹಿನಿಮೆರವಣಿಗೆಯಲ್ಲಿ ಮೇಳೈಸಿತು ನಾಡಿನ ಸಾಂಸ್ಕೃತಿಯ ಅನಾವರಣ


ಸಂಜೆವಾಣಿ ವಾರ್ತೆ
ಹಂಪಿ (ವಿಜಯನಗರ) ಫೆ5 : ಐತಿಹಾಸಿಕ ಹಂಪಿ ಉತ್ಸವದ ಕೊನೆಯ ದಿನ ಭಾನುವಾರ ಗೋದುಳಿ ಸಮಯದಲ್ಲಿ  ಆರಂಭವಾದ ಜಾನಪದ ವಾಹಿನಿ ಮೆರವಣಿಗೆ ವೈಭವಕ್ಕೆ ಸಾಕ್ಷಿಯಾಗುವ ಜೊತೆ ನಾಡಿನ ಸಾಂಸ್ಕøತಿಕ ವೈಭವನ್ನು ಅನಾವರಣಗೊಳಿಸಿತು. 
ಹಂಪಿಯ ಶ್ರೀ ಉದ್ದಾನ ವೀರಭದ್ರೇಶ್ವರ ದೇವಸ್ಥಾನದ ಬಳಿ ಮೆರವಣಿಗೆಗೆ ಶಾಸಕ ಹೆಚ್.ಆರ್.ಗವಿಯಪ್ಪ, ಹರಪನಹಳ್ಳಿ ಶಾಸಕಿ ಲತಾ ಮಲ್ಲಿಕಾರ್ಜುನ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ  ಭುವನೇಶ್ವರಿ ದೇವೆಗೆ ಪುಷ್ಪಾರ್ಪಿಸಿ, ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಮುಂದೆ ರಾಜಗಾಂಭೀರ್ಯದಿಂದ ಲಕ್ಷ್ಮೀ ಆನೆಯು ಹೆಜ್ಜೆ ಹಾಕುತ್ತಿದ್ದರೆ ಹಿಂದೆ ಭುವನೇಶ್ವರಿ ದೇವಿ ಇದ್ದ ರಥ ಕಣ್ಣು ಹಾಯಿಸಿದ ಕಡೆಯೆಲ್ಲಾ ಸಾರ್ವಜನಿಕರು ತಮ್ಮ ಮೊಬೈಲ್ ಮೂಲಕ ಫೋಟೋ ಮತ್ತು ವಿಡಿಯೋ ಚಿತ್ರೀಕರಣ ಮೆರವಣಿಗೆ ನಡೆಯುವ ರಾಜಬೀದಿಯುದ್ದಕ್ಕೂ ಕಲಾ ತಂಡಗಳ ವೈಭವ ಮತ್ತು ಕಲಾತಂಡಗಳ ಸಾಂಪ್ರದಾಯಿಕ ವಾದ್ಯಗಳ ನಾದವೂ ಮಾರ್ಗದುದ್ದಕ್ಕೂ ಪ್ರದರ್ಶನಗೊಂಡಿತು.
ಕಣ್ಣಿಗೆ ಹಬ್ಬ ನೀಡುತ್ತಿರುವ ವೇಷ ಭೂಷಣ ತೊಟ್ಟ ಕಲಾ ತಂಡಗಳ ನೃತ್ಯ. ನೃತ್ಯವನ್ನು ನೋಡುತ್ತಾ ಸಂಭ್ರಮಿಸುತ್ತಿರುವ ಕಲಾ ಪ್ರೇಮಿಗಳು. ಮೆರವಣಿಗೆಯು ಉತ್ಸವಕ್ಕೆ ಆಗಮಿಸಿದ್ದ ಜನತೆಯ ಆಕರ್ಷಣೆಗೆ ಕಾರಣವಾಯಿತು. ವಿದೇಶಿ ಪ್ರವಾಸಿಗರು ಸಹ ಜಾನಪದ ಕಲೆಗಳಿಗೆ ಮನಸೋತು ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ಜಾನಪದ ವಾಹಿನಿಯಲ್ಲಿ ಡೊಳ್ಳು ಕುಣಿತ, ನಾದಸ್ವರ, ಕಹಳೆ ವಾದ್ಯ, ಸಮಾಳ, ನಂದಿಧ್ವಜ, ಮಂಗಳವಾದ್ಯ, ಜೆಂಡೆವಾದ್ಯ, ಸಿಂಗಾರಿ ಮೇಳ, ಕಂಸಾಳೆ, ಸುಡಗಾಡು ಕೈಚಳಕ ಚಮತ್ಕಾರ, ಸಂಸ್ಕøತಿ ಜನಪದ ಕಲೆ, ಚಿಲಿಪಿಲಿಬೊಂಬೆ, ಹಲಗೆ ವಾದನ, ತಮಟೆ ವಾದನ, ಸೋಮನ ಕುಣಿತ, ಸಮಾಳ ಮತ್ತು ನಂದಿಕೋಲು, ಗಾರುಡಿ ಗೊಂಬೆ, ಕೋಲಾಟ, ನಗಾರಿ, ಹಂಪಾ ಪಟ್ಟಣ ಸುಡಗಾಡು, ಕೈಚಳಕ ಚಮತ್ಕಾರ, ಸಂಸ್ಕೃತಿ ಜಾನಪದ ಕಲೆ, ಮೋಹಿನಿ ಭಸ್ಮಾಸುರ ರೂಪಕ, ಹಗಲು ವೇಷ, ಕೀಲು ಕುದುರೆ, ಪೂಜಾ ಕುಣಿತ, ನಂದಿಧ್ವಜ ಮತ್ತು ಸಂಬಾಳ, ಹಲಗೆ ವಾದನ, ವೀರಗಾಸೆ, ಗೋಂಬೆಕುಣಿತ, ಚಿಲಿಪಿಲಿ ಗೊಂಬೆ, ವೀರಗಾಸೆ ಕಲಾ ಪ್ರಕಾರಗಳು ಮೆರವಣಿಗೆಗೆ ಮೆರಗು ನೀಡಿದವು.
ಹಂಪಿಯ ಉದ್ದಾನ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭವಾದ ಜಾನಪದ ವಾಹಿನಿ ಮೆರವಣಿಗೆಯು ಹಂಪಿಯ ಬಜಾರ್ ಮೂಲಕ ವಿರೂಪಾಕ್ಷೇಶ್ವರ ದೇವಸ್ಥಾನದವರೆಗೆ ವೈಭವದಿಂದ ಜರುಗಿತು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ್ ರಂಗಣ್ಣನವರ್ ಅಧಿಕಾರಿಗಳು ಪ್ರವಾಸಿಗರು ಪಾಲ್ಗೊಂಡಿದ್ದರು.