ಹಂಪಿಯ ವಿವಿಧ ಸ್ಮಾರಕಗಳು ವೀಕ್ಷಿಸಿದ ಡಿಸಿ ಅನಿರುದ್ಧ ಶ್ರವಣ್


ಹೊಸಪೇಟೆ(ವಿಜಯನಗರ),ಜು.21: ಹಂಪಿ ವಿಶ್ವಪಾರಂಪರಿಕ ಪ್ರದೇಶಾಭಿವೃದ್ಧಿ ಪ್ರಾಧಿಕಾರದಲ್ಲಿ ಇಂಟರ್ನ್‍ಶಿಫ್‍ಗೆ ಆಗಮಿಸಿದ್ದ ಮಧ್ಯಪ್ರದೇಶದ ಭೋಪಾಲ್ ವಿಶ್ವವಿದ್ಯಾಲಯದ ಸಂರಕ್ಷಣಾ ವಾಸ್ತುಶಿಲ್ಪ ಅಂತಿಮ ವರ್ಷದ ವಿದ್ಯಾರ್ಥಿಗಳೊಂದಿಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಬುಧವಾರ ಹಂಪಿಯ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
ವಿಜಯ ವಿಠ್ಠಲ ಮಂದಿರ, ವಿರೂಪಾಕ್ಷೇಶ್ವರ ದೇವಸ್ಥಾನ,ರಾಮ-ಲಕ್ಷ್ಮಣ ದೇವಸ್ಥಾನ, ಕಮಲ ಮಹಲ್ ಸೇರಿದಂತೆ ವಿವಿಧ ಸ್ಮಾರಕಗಳನ್ನು ವೀಕ್ಷಿಸಿದರು.
ಭೋಪಾಲ್ ವಿಶ್ವವಿದ್ಯಾಲಯದ ಸಂರಕ್ಷಣಾ ವಾಸ್ತುಶಿಲ್ಪ ಪದವಿ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ವಿಶ್ವಪಾರಂಪರಿಕ ತಾಣವಾಗಿರುವ ಹಂಪಿಯ ಕುರಿತು ಡಿಸಿ ಅನಿರುದ್ಧ ಶ್ರವಣ್ ಹಾಗೂ ಪ್ರವಾಸಿ ಮಾರ್ಗದರ್ಶಿಗಳು ಅನೇಕ ವಿಷಯಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು. ಹಂಪಿ ಕುರಿತು ಅನೇಕ ವಿಷಯಗಳನ್ನು ತಿಳಿದು ವಿದ್ಯಾರ್ಥಿಗಳು ಖುಷಿಪಟ್ಟರು.
ಹವಾಮಾದಲ್ಲಿ 42 ದಿನಗಳ ಕಾಲ ಇಂಟರ್ನ್‍ಶಿಫ್ ಅವಧಿಯಲ್ಲಿ ಪಾಲ್ಗೊಂಡಿದ್ದ ಸಂರಕ್ಷಣಾ ವಾಸ್ತುಶಿಲ್ಪ ವಿದ್ಯಾರ್ಥಿಗಳಿಗೆ ವಿಜಯ ವಿಠ್ಠಲ ಟೆಂಪಲ್, ಮಾತಂಗ ಪರ್ವತ, ವಿರೂಪಾಕ್ಷೇಶ್ವರ ದೇವಸ್ಥಾನ,ಲೋಟಸ್ ಮಹಲ್,ಆನೆಸಾಲು ಮಂಟಪ ಸೇರಿದಂತೆ ವಿವಿಧ ಸ್ಮಾರಕಗಳ ಸಮಸ್ಯೆಗಳು,ಸಂರಕ್ಷಣೆಯ ಬಗ್ಗೆ ತಿಳಿಸಿಕೊಡಲಾಯಿತು.
ವಿದ್ಯಾರ್ಥಿಗಳು ವಿವಿಧ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕುರಿತು ಅಂದಾಜುಪಟ್ಟಿಯ ವರದಿಗಳನ್ನು ಈ ಸಂದರ್ಭದಲ್ಲಿ ಹವಾಮಾಗೆ ಸಲ್ಲಿಸಿದರು.
ಇಂಟರ್ನ್‍ಶಿಫ್ ಕೊನೆಯ ದಿನವಾದ ಬುಧವಾರ ಜಿಲ್ಲಾಧಿಕಾರಿಗಳು ಸ್ಮಾರಕಗಳನ್ನು ವಿದ್ಯಾರ್ಥಿಗಳ ಜೊತೆಗೂಡಿ ವೀಕ್ಷಿಸಿ ಎಲ್ಲರಿಗೂ ಪ್ರಮಾಣಪತ್ರಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಹವಾಮಾ ಆಯುಕ್ತರು ಆಗಿರುವ ಹೊಸಪೇಟೆ ಸಹಾಯಕ ಆಯುಕ್ತ ಸಿದ್ದರಾಮೇಶ್ವರ, ಹವಾಮಾ ಪ್ರಾಧಿಕಾರದ ಸಿಬ್ಬಂದಿ,ಪ್ರವಾಸಿ ಮಾರ್ಗದರ್ಶಿಗಳು ಇದ್ದರು.