ಹಂಪಿಯ ವಿರೂಪಾಕ್ಷನ ದರ್ಶನ ಕ್ಕೆ  ಭಕ್ತ ಸಾಗರ ಇಲಾಖೆಯ ದೋರಣೆಗೆ ಭಕ್ತರ ಆಕ್ಷೇಪ :


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ (ವಿಜಯನಗರ), ಜ.16: ಮಕರ ಸಂಕ್ರಾಂತಿ ಪ್ರಯುಕ್ತ ಸೋಮವಾರ ಸಾವಿರಾರು ಭಕ್ತರು ಹಂಪಿಯ ಒಡೆಯ ವಿರೂಪಾಕ್ಷನ ದರ್ಶನ ಪಡೆದಿದ್ದು, ಗರ್ಭ ಗುಡಿಯ  ಮುಂಭಾಗದಲ್ಲಿ ಭಾನುವಾರವಷ್ಟೇ ಇಡಲಾಗಿರುವ ಹೊಸ ಹುಂಡಿ ನಂದಿ ಮತ್ತು ವಿರೂಪಾಕ್ಷನ ನಡುವೆ ಅಡ್ಡ ಬಂದಿದೆ ಎಂದು ಕೆಲವು ಭಕ್ತರು ಆಕ್ಷೇಪಿಸಿ ಮಾತಿನ ಚಕಮಕಿಗೂ ಕಾರಣವಾದ ಘಟನೆ ದಕ್ಷಿಣ ಕಾಶಿ ಎಂದೆ ಖ್ಯಾತವಾದ ಹಂಪಿಯಲ್ಲಿ ಜರುಗಿದೆ.
ಹೌದು ದಕ್ಷಿಣ ಕಾಶಿ ಎಂದೆ ಖ್ಯಾತವಾದ ಹಂಪಿಯಲ್ಲಿ ಸಂಕ್ರಾಂತಿಯಂದು ರಾಜ್ಯ ಹಾಗೂ ನೆರೆಯ ರಾಜ್ಯಗಳಿಂದ ಸಹಸ್ರಾರು ಸಂಖ್ಯೆಯ ಭಕ್ತರು ಬಂದು ವಿರೂಪಾಕ್ಷ ನ ದರ್ಶನ ಪಡೆದು ಸಂಭ್ರಮಿಸಿದರು.
ನಂದಿಯ ಶೃಂಗದಿಂದ ವಿರೂಪಾಕ್ಷನ ಕಣ್ಣನ್ನು ನೋಡಿ ಪ್ರಾರ್ಥನೆ ಸಲ್ಲಿಸುವ ಭಕ್ತರು ಸಾಕಷ್ಟು ಮಂದಿ ಇದ್ದಾರೆ. ಶಿವನ ದರ್ಶನ ಸಿಗದಂತೆ ಹುಂಡಿ ಇಟ್ಟ ಕಾರಣ ಭಕ್ತರ ಭಾವನೆಗೆ ಧಕ್ಕೆ ಉಂಟಾಗಿದೆ ಎಂದು ಕೆಲವು ಭಕ್ತರು ಸೋಮವಾರ ಆಕ್ಷೇಪಿಸಿದರು. ಶಿವನಿಗೆ ಮಾಡಿದ ಆರತಿ ತಟ್ಟೆಯನ್ನು ದೇವರ ಮುಂಭಾಗದ ಬದಲಿಗೆ ಬದಿಯಲ್ಲಿ ಇಡುವುದಕ್ಕೆ ಸಹ ಇನ್ನೂ ಕೆಲವು ಭಕ್ತರು ಆಕ್ಷೇಪಿಸಿದರು. ಹೀಗೆ ಆಕ್ಷೇಪಿಸಿದ ಭಕ್ತರಲ್ಲಿ ಕೆಲವರನ್ನು ಸ್ಥಳದಲ್ಲಿದ್ದ ಪೊಲೀಸರು ಬಲವಂತದಿಂದ ಹೊರಗೆ ಕಳುಹಿಸಿದರು. ಆಗ ವಾಗ್ವಾದವೂ ನಡೆಯಿತು ಎನ್ನಲಾಗಿದೆ.
ವಿವಾದದ ವಿಚಾರವೇ  ಅಲ್ಲ: ‘ಮುಜರಾಯಿ ಇಲಾಖೆಯ ಹಿರಿಯ ಅಧಿಕಾರಿಗಳ ಸೂಚನೆಯಂತೆ ಹೊಸದಾಗಿ ಹುಂಡಿಯನ್ನು ದೇವರ ಮುಂಭಾಗದಲ್ಲಿ ಇಡಲಾಗಿದೆ. ಈ ಹಿಂದೆ ಅದೇ ಸ್ಥಳದಲ್ಲಿ ಮೇಜು ಇತ್ತು, ಹತ್ತಾರು ಭಕ್ತರು ದೇವರಿಗೆ ಅಡ್ಡವಾಗಿ ನಿಂತು ಪೂಜೆ ಸಲ್ಲಿಸುತ್ತಿದ್ದಾಗ ನಂದಿಗೂ, ಶಿವನಿಗೂ ಸಂಪರ್ಕ ಇರುತ್ತಿರಲಿಲ್ಲ. ಆಗ ಆಕ್ಷೇಪಿಸದ ಭಕ್ತರು ಈಗ ಆಕ್ಷೇಪಿಸುತ್ತಿರುವುದು ಏಕೆ? ಮಹಾ ಅಭಿಷೇಕ, ಮಹಾಪೂಜೆ ಸಮಯದಲ್ಲಿ ಹುಂಡಿಯನ್ನು ಬದಿಗೆ ಸರಿಸಿ ಇಡಲಾಗುತ್ತಿದೆ. ಹೀಗಾಗಿ ನಂದಿ–ವಿರೂಪಾಕ್ಷ ನಡುವಿನ ಸಂಪರ್ಕಕ್ಕೆ ಯಾವುದೇ ಧಕ್ಕೆಯೂ ಆಗಿಲ್ಲ’ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹನುಮಂತಪ್ಪ ಸಗಪಷ್ಟಪಡಿಸಿದರು ಭಕ್ತರ ಭಾವನೆಗೆ ಅಡ್ಡಿಯಾಗಿದೆ ಎಂಬ ಆರೋಪ ಮಾತ್ರ ನಿರಾಕರಿಸಲಿಲ್ಲಾ..
‘ಈ ಹೊಸ ನಿಯಮ ಮುಜರಾಯಿ ಇಲಾಖೆಗೆ ಒಳಪಟ್ಟ ಎಲ್ಲಾ ದೇವಸ್ಥಾನಗಳಲ್ಲೂ ಜಾರಿಗೆ ಬರುತ್ತಿದೆ. ಭಕ್ತರು ಕಾಣಿಕೆಯನ್ನು ದೇವರ ಮುಂಭಾಗದಲ್ಲಿ ಹುಂಡಿಗೆ ಹಾಕುವಂತಾಗಬೇಕು, ಅವರು ದೇವರನ್ನು ಸರಿಯಾಗಿ ದರ್ಶನ ಮಾಡಿ, ಬಳಿಕ ಮಂಗಳಾರತಿ ಪಡೆದು ಹೊರಗೆ ಹೋಗುವ ವ್ಯವಸ್ಥೆಯನ್ನು ಈಗ ಮಾಡಲಾಗಿದೆ. ಈ ಹಿಂದೆ ಅರ್ಚಕರು ದೇವರಿಗ ಅಡ್ಡಲಾಗಿ ನಿಂತು ಪೂಜೆ ಮಾಡುತ್ತಿದ್ದರು. ಈಗಿನ ಹೊಸ ವ್ಯವಸ್ಥೆಯನ್ನು ಬಹುಪಾಲು ಭಕ್ತರು, ಪ್ರವಾಸಿಗರು ಮೆಚ್ಚಿಕೊಂಡಿದ್ದಾರೆ. ಅವರಿಗೆ ಸರಿಯಾಗಿ ದೇವರ ದರ್ಶನ ಆಗುತ್ತಿದೆ, ಹುಂಡಿಗೆ ದುಡ್ಡು ಹಾಕುವುದು ಸಹ ಸಾಧ್ಯವಾಗುತ್ತಿದೆ’ ಎಂದು ಅವರು ಹೇಳಿದರು.
ಹೊಸ ವ್ಯವಸ್ಥೆಯಿಂದ ಅರ್ಚಕರ ಆದಾಯಕ್ಕೆ ಖೋತಾ ಶಂಕೆ
ಕಾಣಿಕೆ ಹುಂಡಿ: ಇತರ ದೇವಸ್ಥಾನಗಳಲ್ಲೂ ಇದೇ ವ್ಯವಸ್ಥೆ ಜಾರಿ
ಹುಂಡಿಗೆ ಇದೆ ಗಾಲಿ, ಮಹಾಪೂಜೆ ವೇಳೆ ಬದಿಗೆ ಸರಿಸುವ ವ್ಯವಸ್ಥೆ
ಎಲ್ಲವೂ ನಿಯಮ ಪ್ರಕಾರವೇ ನಡೆದಿದೆ. ಭಕ್ತರು, ಪ್ರವಾಸಿಗರಿಗೆ ಸಾಧ್ಯವಾದ  ಮಟ್ಟಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡುವುದಷ್ಟೇ ನಮ್ಮ ಉದ್ದೇಶ
ಹನುಮಂತಪ್ಪ, ವಿರೂಪಾಕ್ಷ ದೇವಸ್ಥಾನದ ಆಡಳಿತಾಧಿಕಾರಿ
ದೂರು ನೀಡುವ ಸಾಧ್ಯತೆ.!
ನಂದಿ–ವಿರೂಪಾಕ್ಷನ ನಡುವೆ ಹುಂಡಿ ಅಡ್ಡ ಬಂದುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರಭಾವಿ ನಾಯಕರೊಬ್ಬರನ್ನು ತಳ್ಳಿ, ಅವರನ್ನು ಬಲವಂತದಿಂದ ಹೊರಗೆ ಕಳುಹಿಸಿದ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠರಿಗೆ ದೂರು ನೀಡಲು ಸಿದ್ಧತೆ ನಡೆದಿದೆ ಎನ್ನಲಾಗಿದೆ