ಹಂಪಿಯ ಲೋಕಪಾವನಿಯಲ್ಲಿ ವಿಷ : ಮೀನು ಮರಿಗಳ ಮಾರಣ ಹೋಮ

ಹೊಸಪೇಟೆ ಏ18 : ಹಂಪಿಯ ಪವಿತ್ರ ಲೋಕಪಾವನಿಯಲ್ಲಿ ಕಿಡಿಗೇಡಿಗಳ ಕೃತ್ಯದಿಂದ ಮೀನುಮರಿಗಳು ಮಾರಣ ಹೋಮ ನಡೆಯುತ್ತಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಹಂಪಿಯ ವಿದ್ಯಾರಣ್ಯ ಭಾರತಿ ಸ್ವಾಮಿಗಳು ಕೇಂದ್ರಸ್ಥಾನದಲ್ಲಿ ಇಲ್ಲದ ಸಮಯದಲ್ಲಿ ಯಾರೋ ಕಿಡಿಗೇಡಿಗಳು ಶ್ರೀಮಠದ ಬಳಿಯೇ ಬಂದು ಲೋಕಪಾವನಿ ಕೊಳ್ಳದಲ್ಲಿ ವಿಷ ಹಾಕಿ ಕೊಳ್ಳದ ಸ್ವಚ್ಛತೆಯ ದೃಷ್ಟಿಯಿಂದ ಹಾಕಲಾಗಿರುವ ಮೀನುಮರಿಗಳು ಸಾಯುವಂತೆ ಮಾಡಿದ್ದಾರೆ ಎಂದು ಮಠದ ಭಕ್ತರು ಪೊಲೀಸರಿಗೆ ಹಾಗೂ ಸ್ವಾಮಿಗಳಿಗೆ ಮಾಹಿತಿ ತಲುಪಿಸಿದ್ದಾರೆ.
ಹಂಪಿಯ ಈ ಪವಿತ್ರ ಲೋಕಪಾವನಿಯ ನೀರು ಮಠ, ದೇವಸ್ಥಾನ, ಪಾಕಶಾಲೆ ಸೇರಿದಂತೆ ದೇವಾಲಯ ಪ್ರಾಂಗಣದಲ್ಲಿ ಹರಿಯುವದರಿಂದ ವಿಷ ಹರಡುವ ಸಾಧ್ಯತೆಯೂ ಇದೆ. ಆದರೆ ಪ್ರಾಯಶಃ ರಾತ್ರಿ ವೇಳೆಯಲ್ಲಿ ಆಗಿರುವುದರಿಂದ ಕೇವಲ ಮೀನು ಮರಿಗಳಿಗೆ ಮಾತ್ರ ಕಂಟಕವಾಗಿರುಬಹುದು ಎನ್ನಲಾಗಿದೆ. ಈ ಕುರಿತು ಪ್ರಕರಣ ದಾಖಲಾಗಿ ತನಿಖೆ ಕೈಗೊಂಡರೆ ಮಾತ್ರ ಸತ್ಯ ತಿಳಿಯಬಹುದಾಗಿದೆ. ವಿದ್ಯಾರಣ್ಯ ಭಾರತೀ ಸ್ವಾಮಿಗಳು ಬಂದ ನಂತರ ಈ ಕುರಿತು ಪೊಲೀಸ ಪ್ರಕರಣ ದಾಖಲಿಸುವರೋ ಕಾದುನೋಡಬೇಕು.