ಹಂಪಿಯಲ್ಲಿ ನ2 ರಂದು ಕರ್ನಾಟಕ ಜ್ಯೋತಿ ಯಾತ್ರೆಗೆ ಸಿಎಂ ಚಾಲನೆ


ಸಂಜೆವಾಣಿ ವಾರ್ತೆ
ಹೊಸಪೇಟೆ ಅ19: ಕರ್ನಾಟಕ ಸಂಭ್ರಮ 50ರ ಆಚರಣೆಯನ್ನು ವರ್ಷವಿಡೀ ರಾಜ್ಯಾದ್ಯಾಂತ ಸಂಭ್ರಮದಿಂದ ಆಚರಿಸಲು ಸರ್ಕಾರ ತೀರ್ಮಾನಿಸಿದ್ದು, ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಅಧಿಕಾರಿಗಳು ಮುತುರ್ವಜಿ ವಹಿಸಿ, ಕಾರ್ಯಕ್ರಮವನ್ನು ಯಶ್ವಸಿಗೊಳಿಸಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ ತಂಗಡಗಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಲಾಗಿದ್ದ ಕರ್ನಾಟಕ ಸಂಭ್ರಮ 50ರ ಆಚರಣೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, 1973 ರ ಇತಿಹಾಸವನ್ನೇ ಹಂಪಿಯಲ್ಲಿ ಮತ್ತೊಮ್ಮೆ ಮರು ಕಳಿಸುವಂತೆ ಆಗಬೇಕು ಎಂದರು. 1973 ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಡಿ.ದೇವರಾಜ ಅರಸು ಅವರು ಮೈಸೂರು ರಾಜ್ಯವನ್ನು ಕರ್ನಾಟಕ ರಾಜ್ಯ ಎಂದು ನಾಮಕರಣ ಮಾಡಿದರು. ನ.1 ಕ್ಕೆ ಇದು 50 ವರ್ಷವಾಗುತ್ತಿದೆ, ಹಾಗಾಗಿ ಮುಖ್ಯಮಂತ್ರಿ ಅವರು ಈ ಕಾರ್ಯಕ್ರಮವನ್ನು ಇಡೀ ರಾಜ್ಯದ್ಯಾಂತ ಒಂದು ವರ್ಷದ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಹೆಸರು ಆಗಲಿ ಕರ್ನಾಟಕ, ಉಸಿರು ಆಗಲಿ ಕನ್ನಡ ಎಂಬ ಧ್ಯೇಯ ವ್ಯಾಕ್ಯದೊಂದಿಗೆ ಆಚರಿಸಲು ನಿರ್ಧಾರಿಸಲಾಗಿದೆ. ಕಾರ್ಯಕ್ರಮ ರೂಪುರೇಷಗಳನ್ನು ಸಿದ್ದ ಪಡಿಸಲು ಸಾಹಿತಿಗಳು, ಹೋರಾಟಗಾರರ ಹಾಗೂ ಕಲಾವಿದರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ ಎಂದರು.
ಸಿಎಂ ಸಿದ್ದರಾಮಯ್ಯ ಚಾಲನೆ:
ಹಂಪಿಯಲ್ಲಿ ನ 2 ರಂದು ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಜ್ಯೋತಿ ಬೆಳಗಿಸುವ ಮೂಲಕ ಕರ್ನಾಟಕ ಜ್ಯೋತಿಗೆ ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್‍ಖಾನ ತಿಳಿಸಿದರು. ಕರ್ನಾಟಕ ಜ್ಯೋತಿಯು ಹಂಪಿಯಿಂದ ಆರಂಭವಾಗಿ ಕೊಪ್ಪಳ ಮೂಲಕ ನ.3ರಂದು ಗದಗ ತಲುಪಲಿದ್ದು ಕರ್ನಾಟಕ ಜ್ಯೋತಿಗೆ ಸಂಚರಿಸುವ ಮಾರ್ಗದಲ್ಲಿ ಸೂಕ್ತ ಭದ್ರತೆ ಕೈಗೊಳ್ಳಬೇಕು ಎಂದು ಸೂಚಿಸಿದರು.
ಶಾಸಕ ಹೆಚ್.ಆರ್.ಗವಿಯಪ್ಪ, ಕಂಪ್ಲಿ ಶಾಸಕ ಗಣೇಶ, ಜಿಲ್ಲಾಧಿಕಾರಿ ದಿವಾಕರ ಎಂ.ಎಸ್., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್., ಪ್ರಾದೇಶಿಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್, ಅಪರ ಜಿಲ್ಲಾಧಿಕಾರಿ ಅನುರಾಧ ಜಿ., ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.