ಹಂಪಿಯಲ್ಲಿ ಜಿ-20 3ನೇ ಶೆರ್ಪಾ ಸಭೆ ಆರಂಭ:ನ್ಯೂ ದೆಹಲಿ ಘೋಷಣೆಗೆ ಅಂತಿಮ ರೂಪ


ಸಂಜೆವಾಣಿ ವಾರ್ತೆ
ಹೊಸಪೇಟೆ ಜುಲೈ.14: ಭಾರತದ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಜಿ-20 ಶೃಂಗ ಸಭೆಯ 3ನೇ ಶೆರ್ಪಾ ಸಭೆಗೆ ಗುರುವಾರ ವಿಶ್ವವಿಖ್ಯಾತ ಹಂಪಿಯಲ್ಲಿ ಚಾಲನೆ ದೊರೆತಿದೆ. ಮುಂಬರುವ ಸೆಪ್ಟೆಂಬರ್‍ನಲ್ಲಿ ಜರುಗುವ ಶೃಂಗ ಸಭೆಯಲ್ಲಿ ನ್ಯೂ ದೆಹಲಿ ಘೋಷಣೆ ಅಳವಡಿಸಿಕೊಳ್ಳಲು ಜಿ-20 ರಾಷ್ಟ್ರಗಳ ಮುಖಂಡರು ಸಹಿ ಮಾಡಲಿದ್ದು, ನ್ಯೂ ದೆಹಲಿ ಘೋಷಣೆಯ ಕರಡು ಪ್ರತಿಗೆ ಅಂತಿಮ ರೂಪ ನೀಡುವ ಕೆಲಸ ಶೆರ್ಪಾಸಭೆಯಲ್ಲಿ ನಡೆಯಲಿದೆ.
ಹಂಪಿಯ ಎವೆಲಾವ್ ಬ್ಯಾಕ್ ಖಾಸಗಿ ರೆಸಾರ್ಟ್‍ನಲ್ಲಿ 3ನೇ ಶೆರ್ಪಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಜಿ-20ಯ ಭಾರತೀಯ ಶೆರ್ಪಾ ಅಮಿತಾಬ್ ಕಾಂತ್, ಈಗಾಗಲೇ ರಾಜಸ್ಥಾನದ ಉದಯಪುರ ಹಾಗೂ ಕೇರಳದ ಕುಮಾರಕೊಂ ಅಲ್ಲಿ ನೆಡೆದ ಶೆರ್ಪಾ ಸಭೆಗಳು ಯಶಸ್ವಿಯಾಗಿವೆ. ಜಿ-20 ರಾಷ್ಟ್ರಗಳ ಮುಖಂಡರು, ಹಣಕಾಸು ಸಚಿವರು, ಹಣಕಾಸು ಸಂಸ್ಥೆಗಳ ಮುಖ್ಯಸ್ಥರ ಸಭೆಗಳು ಜರುಗಿವೆ. ಈ ಸಭೆಗಳಲ್ಲಿ ಜಿ-20 ರಾಷ್ಟ್ರಗಳ ಆರ್ಥಿಕ ಬೆಳವಣಿಗೆ, ಸುಸ್ಥಿರ ಅಭಿವೃದ್ಧಿ, ತಾಂತ್ರಿಕ ಮುನ್ನಡೆ, ಹಸಿರೀಕರಣ, ಮಹಿಳಾ ಅಭಿವೃದ್ಧಿ, ವಿವಿಧ ರಾಷ್ಟ್ರಗಳ ನಡುವೆ ಹಣಕಾಸು ಹಾಗೂ ಶೈಕ್ಷಣಿಕ ಸಂಸ್ಥೆಗಳ ಸ್ಥಾಪನೆ ಸೇರಿದಂತೆ ಇನ್ನಿತರ ಗುರಿಗಳನ್ನು ಸಾಧಿಸಲು ತೀವ್ರ ತರನಾದ ಒತ್ತು ನೀಡಿ ಚರ್ಚೆ ನಡೆಸಲಾಗಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಜಿ-20 ಶೃಂಗ ಸಭೆಗೆ ಚಾಲನೆ ನೀಡಿ ವಿಶೇಷ ಮುತುವರ್ಜಿ ವಹಿಸಿ, ಎಲ್ಲಾ ಸದಸ್ಯ ರಾಷ್ಟ್ರಗಳನ್ನು ಒಳಗೊಂಡು, ಮಹತ್ವಾಕಾಂಕ್ಷೆ ಗುರಿಗಳನ್ನು ಸಾಧಿಸಲು, ಕ್ರಿಯಾತ್ಮಕ ಯೋಜನೆಗಳನ್ನು ರೂಪಿಸಿ ಕಾರ್ಯರೂಪಕ್ಕೆ ತರುವಂತೆ ಸೂಚನೆ ನೀಡಿದ್ದಾರೆ. ಜಗತ್ತಿನ ಮುಂದೆ ಅಪಾರ ಪ್ರಮಾಣದ  ಸವಾಲುಗಳಿವೆ. ಈ ಜಾಗತಿಕ ಸವಾಲುಗಳಿಗೆ ಸಶಕ್ತ ಪರಿಹಾರ ಕಂಡುಕೊಳ್ಳುವ ಗುರುತರ ಕಾರ್ಯ ಶೆರ್ಪಾ ಸಭೆಯ ಮಾಡಬೇಕಿದೆ. ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ದಿಟ್ಟ ಹೆಜ್ಜೆ ಇಡಬೇಕಿದೆ. ಬಲವಾದ ಬದ್ದತೆಯಿಂದ ಕಾರ್ಯ ನಿರ್ವಹಿಸಬೇಕಾಗಿದೆ ಎಂದರು. 
ಜಿ-20 ರಾಷ್ಟ್ರಗಳ ಪ್ರತಿನಿಧಿಗಳು ಭಾರತದ ಐತಿಹಾಸಿಕ ಸ್ಥಳಗಳನ್ನು ಅನ್ವೇಷಿಸುವುದರೊಂದಿಗೆ ಜಾಗತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಿದ್ದಾರೆ. ಹಂಪಿ ಐತಿಹಾಸಿಕವಾಗಿ ಹಾಗೂ ಸಾಂಸ್ಕೃತಿಕ ಮಹತ್ವ ಸ್ಥಳವಾಗಿದ್ದು ನಾಲ್ಕು ದಿನಗಳ ಕಾಲ ನ್ಯೂ ದೆಹಲಿ ಘೋಷಣೆಯ ಕರಡು ಪ್ರತಿ ಕುರಿತು ಸಾಲು ಸಾಲು ಸಭೆ ಹಾಗೂ ಚರ್ಚೆ ನಡೆಸಲಾಗುವುದು. ಎಲ್ಲಾ ಸದಸ್ಯ ರಾಷ್ಟ್ರಗಳು ಅಭಿಪ್ರಾಯಗಳನ್ನು ಸಂಗ್ರಹಿಸಿ, ಅವರು ನೀಡುವ ಸಲಹೆ ಸೂಚನೆಗಳನ್ನು ಆಧರಿಸಿ ಕರಡು ಪ್ರತಿಗೆ ರೂಪ ಕೊಡವ ಮಹತ್ವಾಂಕ್ಷೆಯನ್ನು ಈ ಸಭೆಯು ಹೊಂದಿದೆ ಎಂದರು.