
ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ (ವಿಜಯನಗರ) ನ.3: ಇತರೆ ಭಾಷೆಗಳನ್ನು ಕಲಿಯಿರಿ, ಗೌರವಿಸಿ, ಆದರೆ ಕನ್ನಡದಲ್ಲೇ ವ್ಯವಹರಿಸಿರಿ ಎಂದು ಐತಿಹಾಸಿಕ ಹಂಪಿಯಲ್ಲಿ ಜರುಗಿದ “ಕರ್ನಾಟಕ 50ರ ಸಂಭ್ರಮ”ಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿದರು.
ಕರ್ನಾಟಕ ಎಂದು ನಾಮಕರಣಗೊಂಡು ನವಂಬರ್ 1ಕ್ಕೆ 50 ವರ್ಷಗಳನ್ನು ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಹಾಗೂ ವಿಜಯನಗರ ಜಿಲ್ಲಾಡಳಿತ ಇವರ ಸಹಯೋಗದಲ್ಲಿ ವಿಜಯನಗರ ಸಾಮ್ರಾಜ್ಯ ಹಂಪಿಯ ಎದುರು ಬಸವಣ್ಣ ವೇದಿಕೆಯಲ್ಲಿ ಆಯೋಜಿಸಲಾದ `ಕರ್ನಾಟಕ ಸಂಭ್ರಮ-50ರ’ ವಿಶೇಷ ಕಾರ್ಯಕ್ರಮದಲ್ಲಿ ಜ್ಯೋತಿರಥಕ್ಕೆ ಪ್ರಜ್ವಲನೆ ಮಾಡಿ, ನಗಾರಿ ಬಾರಿಸುವ ಮೂಲಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯದ ನಂತರ 1956ರ ನವಂಬರ್ 1ರಂದು ಮೈಸೂರು ರಾಜ್ಯವು ಉದಯವಾಯಿತು. ಪೂರ್ವದಲ್ಲಿ ಕನ್ನಡ ನಾಡು ವಿವಿಧ ಭಾಗಗಳಲ್ಲಿ ಹಂಚಿ ಹೋಗಿತ್ತು. ಕನ್ನಡ ಬದುಕನ್ನು ಉನ್ನತೀಕರಿಸುವ ಆಶಯದಿಂದ ಏಕೀಕರಣ ಚಳವಳಿ ನಡೆದು ಹಲವರ ಪ್ರಾಣ ತ್ಯಾಗವನ್ನೂ ಪಡೆದು ವಿಶಾಲ ಕನ್ನಡ ನಾಡು ಉದಯವಾಗಿದೆ. 1973ರ ನವಂಬರ್ 1ರಂದು ಅಂದಿನ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರು ಮೈಸೂರು ರಾಜ್ಯಕ್ಕೆ `ಕರ್ನಾಟಕ’ ಎಂದು ಮರು ನಾಮಕರಣ ಮಾಡಿ, ಇದೇ ಹಂಪಿಯಿಂದ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ವಿರೂಪಾಕ್ಷ, ಪಂಪ ಮತ್ತು ಭುವನೇಶ್ವರಿ ದೇವಿಯ ದರ್ಶನ ಪಡೆದು, ನವಂಬರ್ 2ರಂದೇ ಜ್ಯೋತಿರಥಯಾತ್ರೆಗೆ ಚಾಲನೆ ನೀಡಿದ್ದರು ಎಂದು ಹೇಳಿದರು.
ವರ್ಷವಿಡಿ ಸುವರ್ಣ ಸಭ್ರಮಾಚರಣೆ:
ಕರ್ನಾಟಕ ನಾಮಕರಣಗೊಂಡು 50ನೇ ವರ್ಷದ ಆಚರಣೆಯನ್ನು ಕಳೆದ ವರ್ಷವೇ ಮಾಡಬೇಕಿತ್ತು. ಸರ್ಕಾರ ಬಂದ ತಕ್ಷಣವೇ ಜುಲೈ ಬಜೆಟ್‍ನಲ್ಲಿ ಅವಕಾಶ ಕಲ್ಪಿಸಿ, “ಕರ್ನಾಟಕ ಸಂಭ್ರಮ-50” ನ್ನು `ಹೆಸರಾಯಿತು ಕರ್ನಾಟಕ ಉಸಿರಾಯಿತು ಕನ್ನಡ’ ಘೋಷ ವಾಕ್ಯದಡಿ ಇಡೀ ವರ್ಷ ಸಂಭ್ರಮಾಚರಣೆ ಮಾಡಲಿದ್ದು, ಕಲೆ, ಸಾಹಿತ್ಯ, ಸಂಸ್ಕೃತಿಯ ಪರಾಮರ್ಶೆ ಮತ್ತೆ-ಮತ್ತೆ ಜಾಗೃತಿಗೊಳಿಸುವಂತಹ ಕಾರ್ಯಕ್ರಮ ಮಾಡಲು ಸಂಕಲ್ಪ ಮಾಡಿದ್ದೇವೆ ಎಂದರು.
ಬಸವಣ್ಣನ ನಾಡು ಇದು. ಕಲ್ಯಾಣ ಕರ್ನಾಟಕ ಎಂದು ಕೇವಲ ಹೆಸರಿಟ್ಟರೆ ಸಾಲದು. ನಿಜವಾದ ಅರ್ಥದಲ್ಲಿ ಈ ಭಾಗದ ಜನರ ಕಲ್ಯಾಣ ಕಾಣಬೇಕು ಎನ್ನುವ ಗುರಿ ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ.
ಈ ಉದ್ದೇಶದಿಂದಲೇ 371 (ಜೆ) ಜಾರಿ ಮಾಡಲಾಗಿದೆ. ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆಯವರು ಹಾಗೂ ವೈಜನಾಥ ಪಾಟೀಲ್ ಅವರು ಸೇರಿದಂತೆ ಹಲವರ ಹೋರಾಟದ ಫಲವಾಗಿ ಈ ಭಾಗಕ್ಕೆ 371 ಜೆ ಜಾರಿಯಾಗಿದೆ. ಇದು ಜಾರಿ ಆಗಿದ್ದರಿಂದ ಈ ಭಾಗಕ್ಕೆ ಹೆಚ್ಚೆಚ್ಚು ಅನುದಾನ ಅವಕಾಶಗಳು ಮತ್ತು ಇಂಜಿನಿಯರ್, ವೈದ್ಯರಾಗಲು ಮತ್ತು ಶಿಕ್ಷಕರಾಗಲು ಅವಕಾಶ ಸಿಕ್ಕಿದೆ. ಖಾಲಿ ಇರುವ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಭಾಗದ ಅಭಿವೃದ್ಧಿಗಾಗಿ ಉಳಿದ 2 ಸಾವಿರ ಕೋಟಿ ಅನುದಾನದ ಜತೆಗೆ ಹೆಚ್ಚುವರಿಯಾಗಿ ಈ ಭಾಗಕ್ಕೆ 3 ಸಾವಿರ ಕೋಟಿ ರೂ ಅನುದಾನ ನೀಡಿತ್ತೇನೆ ಎಂದರು.
ಬಸವಣ್ಣನವರ ರೀತಿ ನಾನೂ ಮೌಢ್ಯ ನಂಬುವುದಿಲ್ಲ. ನನಗೆ ಮೌಢ್ಯದಲ್ಲಿ ನಂಬಿಕೆ ಇಲ್ಲ. ಬಸವಣ್ಣನವರೂ ಸೇರಿ ಶರಣರು ಮೌಢ್ಯದ ವಿರುದ್ಧ ಹೋರಾಡಿ, ಜಾಗೃತಿ ಮೂಡಿಸಿದ್ದರು. ನಾನೂ ಕೂಡ ಮೌಢ್ಯವನ್ನು ಧಿಕ್ಕರಿಸಿ ಈ ನಾಡಿನ ಜನರ ಮೇಲೆ ನಂಬಿಕೆ ಇಟ್ಟಿದ್ದೇನೆ. ದೇವರಲ್ಲಿ, ದೇವರು ಎನ್ನುವ ಶಕ್ತಿಯಲ್ಲಿ ನನಗೆ ನಂಬಿಕೆ ಇದೆ. ಜನರಿಗೆ ಒಳಿತಾಗುವುದನ್ನು ನಾನು ನಂಬುತ್ತೇನೆ ಎಂದು ಹೇಳಿದರು.
1983ರಲ್ಲಿ ಮೊದಲ ಬಾರಿ ಶಾಸಕನಾದಾಗ ಹೆಗ್ಡೆ ಸಂಪುಟದಲ್ಲಿ ಕನ್ನಡ ಕಾವಲು ಸಮಿತಿಯ ಅಧ್ಯಕ್ಷನಾಗಿ ಒಂದು ವರ್ಷ ಆಡಳಿತದಲ್ಲಿ ಕನ್ನಡ ಪರಿಣಾಮಕಾರಿಯಾಗಿ ಜಾರಿ ಮಾಡಲು ಇಂಗ್ಲೀಷ್‍ನಲ್ಲಿದ್ದ ಟೈಪರೇಟರ್‍ಗಳನ್ನು ಬದಲಾಯಿಸಿ, ಕನ್ನಡದ ಟೈಪ್‍ರೇಟರ್‍ಗಳನ್ನು ಸರ್ಕಾರಿ ಕಚೇರಿಗಳಿಗೆ ನೀಡುವ ಮೂಲಕ ಕನ್ನಡದಲ್ಲಿ ವ್ಯವಹರಿಸಲು ಆದೇಶಿಸಲಾಯಿತು. ಎಲ್ಲರು ಈ ನೆಲ, ಜನ, ಸಂಸ್ಕೃತಿಯನ್ನು ಪ್ರೀತಿಸಬೇಕು. ವಿಜಯನಗರ ಅರಸರು ಕಲೆ, ಸಾಹಿತ್ಯಕ್ಕೆ ಅಪಾರ ಕೊಡುಗೆ ನೀಡಿದ್ದರು. ಅಂದು ಸಂಪತ್‍ಭರಿತವಾಗಿತ್ತು. ಅದೇ ರೀತಿ ಸಂಪತ್‍ಭರಿತ ರಾಜ್ಯ ಮಾಡಬೇಕಾಗಿದೆ ಎಂದರು.
ಈ ಸುವರ್ಣ ಸಂಭ್ರಮವು ವರ್ಷಪೂರ್ತಿ ನಡೆಯುತ್ತಿದ್ದು, ಜ್ಯೋತಿ ರಥಯಾತ್ರೆಯ ಮೂಲಕ 2024ರ ನವಂಬರ್ 1ರವರೆಗೂ ವಿವಿಧ ಕಾರ್ಯಕ್ರಮಗಳು ರಾಜ್ಯಾದ್ಯಂತ ನಡೆಯಲಿದ್ದು, ಈ ಸಂದರ್ಭದಲ್ಲಿ ಕರ್ನಾಟಕದ ಸಾರ್ವಭೌಮತೆ ಎತ್ತಿಹಿಡಿಯಲು ಕನ್ನಡದ ಅನಿವಾರ್ಯತೆ, ವಾತಾವರಣ ನಿರ್ಮಾಣ ಮಾಡುತ್ತೇವೆ ಎಂದು ಶಪಥ ಮಾಡಿ. ಜ್ಯೋತಿರಥಯಾತ್ರೆ ಸಂಚರಿಸಲು ಎಲ್ಲರೂ ಸಹಕರಿಸಿ ಎಂದರು.
ಮುಖ್ಯಮಂತ್ರಿಗಳಿಂದ ಕನ್ನಡ ಸಂಕಲ್ಪ ಬೋಧನೆ:
ಕಾರ್ಯಕ್ರಮದ ಅಂಗವಾಗಿ ಮುಖ್ಯಮಂತ್ರಿಗಳು ಕನ್ನಡ ಸಂಕಲ್ಪ ಬೋಧನೆ ಮಾಡಿದರು. ಎಲ್ಲರೂ ಸಾಮೂಹಿಕವಾಗಿ ಪ್ರತಿಜ್ಞೆ ಸ್ವೀಕರಿಸಿದರು.
ವಸತಿ, ವಕ್ಫ್ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಜೆಡ್ ಜಮೀರ್ ಅಹ್ಮದ್ ಖಾನ್ ಅವರು ಮಾತನಾಡಿ, ಸುವರ್ಣ ಕರ್ನಾಟಕ ವರ್ಷಾಚರಣೆ ರಾಜ್ಯದಲ್ಲಿ ವಿಶಿಷ್ಟ ರೀತಿಯಲ್ಲಿ ಆಚರಣೆ ಮಾಡಲಾಗುತ್ತಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ ಎಸ್.ತಂಗಡಗಿ ಅವರು ಮಾತನಾಡಿ, ಕರ್ನಾಟಕ ನಾಮಕರಣ ಮಾಡಿದ ಅರಸು ಅವರು ಹಂಪಿಗೆ ಬಂದು ದೇವರ ದರ್ಶನ ಪಡೆದು ರಥಯಾತ್ರೆಗೆ ಜ್ಯೋತಿ ಬೆಳಗಿಸಿದ್ದರು. ಅದರ ನೆನಪಿನಲ್ಲಿ ಹಂಪಿಯಿಂದಲೇ ಸುವರ್ಣ ಸಂಭ್ರಮರಥ ಇಲ್ಲಿಂದಲೇ ಹೊರಡಲಿದೆ ಎಂದರು.
ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಇಲಾಖೆ ಸಚಿವರಾದ ಹೆಚ್.ಕೆ.ಪಾಟೀಲ್ ಅವರು ಮಾತನಾಡಿ, ಕರ್ನಾಟಕ ಸಂಭ್ರಮ ವಿಶಿಷ್ಟ ರೀತಿಯಲ್ಲಿ ಏರ್ಪಾಡು ಮಾಡಲಾಗಿದೆ. ಇದರ ಇತಿಹಾಸ ದೊಡ್ಡದಿದೆ. ಕರ್ನಾಟಕ ನಾಮಕರಣ ಆದಮೇಲೆ ಇದೇ ಜ್ಯೋತಿ ಗದಗಿನ ವೀರನಾರಾಯಣ ಸನ್ನಿಧಿಗೆ ಬಂದಿತ್ತು. ಅಲ್ಲಿಗೆ ಅರಸುರವರು ಬಂದಿದ್ದರು ಎಂದು ಸ್ಮರಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ. ಎನ್.ಮಂಜುಳ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯನಗರ ಶಾಸಕರಾದ ಹೆಚ್.ಆರ್.ಗವಿಯಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವರಾದ ರಾಮಲಿಂಗಾರೆಡ್ಡಿ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಭೈರತಿ ಸುರೇಶ, ಕೆ.ಎಂ.ಎಫ್. ಅಧ್ಯಕ್ಷ ಭಿಮಾನಾಯ್ಕ್, ಶಾಸಕರುಗಳಾದ ಡಾ. ಎನ್.ಟಿ.ಶ್ರೀನಿವಾಸ್, ಲತಾ ಮಲ್ಲಿಕಾರ್ಜುನ, ಈ.ತುಕಾರಾಂ, ಜಿ.ಎನ್.ಗಣೇಶ್, ಮಂಜುನಾಥ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್, ಐಜಿ ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿ ಬಾಬು ಬಿ.ಎಲ್., ಹಂಪಿ ಗ್ರಾ.ಪಂ ಅಧ್ಯಕ್ಷೆ ರಜೀನಿ ಷಣ್ಮುಖ, ಮಾಜಿ ಸಂಸದರಾದ ವಿ.ಎಸ್.ಉಗ್ರಪ್ಪ ಹಾಗೂ ವಿವಿಧ ಗಣ್ಯರು ಅಪಾರ ಸಂಖ್ಯೆಯ ಕಲಾರಾಧಕರು ಪಾಲ್ಗೊಂಡಿದ್ದರು.
ಕನ್ನಡ ನಾಡು ನುಡಿಯ ಸೌರಭವನ್ನು ಪರಿಚಯಿಸುವ ಅನೇಕ ಸಾಂಸ್ಕೃತಿ ಕಾರ್ಯಕ್ರಮಗಳು ನೆರದಿದ್ದ ಕಲಾರಾಧಕರನ್ನು ರಂಚಿಸಿದವು. ಮುಖ್ಯ ಮಂತ್ರಿ ಸಿದ್ಧರಾಯ ಸಹ ಕುರಿಗಾಯಿಗಳೊಂದಿಗೆ ಹೆಚ್ಚೆ ಕಾಕಿ ಸಾಂಸ್ಕೃತಿಕ ರಸದೌತಣ ಸವಿದರು.