ಹಂಪಿಯಲ್ಲಿನ ಮೂಲಸೌಕರ್ಯ: ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಆನಂದಸಿಂಗ್

(ಸಂಜೆವಾಣಿ ಪ್ರತಿನಿಧಿಯಿಂದ)
ಹೊಸಪೇಟೆ, ಸೆ.22: ಬೆಂಗಳೂರಿನ ವಿಕಾಸಸೌಧದಲ್ಲಿ ವಿಶ್ವ ಪಾರಂಪರಿಕ ಪ್ರವಾಸಿ ತಾಣವಾದ ಹಂಪಿಯಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಕುರಿತು ಸಚಿವ ಆನಂದ್ ಸಿಂಗ್ ಅವರು  ಪರಿಶೀಲನಾ ಸಭೆ ನಡೆಸಿದರು. ಸಭೆಯಲ್ಲಿ ಹಂಪಿಗೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ತ್ವರಿತವಾಗಿ ಕ್ರಮ ಕೈಗೊಳ್ಳಲು ಸಭೆಯಲ್ಲಿ ಸೂಚಿಸಿದರು.
ಇಲಾಖೆಗಳ ಮಧ್ಯ ಸಮನ್ವಯತೆ ಇಲ್ಲದಿರುವುದು ಅನೇಕ ಮೂಲಸೌಕರ್ಯಗಳ ಕೊರತೆಗೆ ಕಾರಣವಾಗಿದೆ. ಇದು ಪ್ರವಾಸಿಗರಿಗೆ ತುಂಬಾನೆ ತೊಂದರೆಯಾಗಿದೆ ಪ್ರವಾಸೋದ್ಯಮ ಇಲಾಖೆಯನ್ನು ವಹಿಸಿಕೊಂಡ ನಂತರ ಸಮಸ್ಯ ಇತ್ಯರ್ಥಕ್ಕೆ ಸಚಿವರು ಮುಂದಾಗಬೇಕು ಎಂಬ ಹಿನ್ನಲೆಯಲ್ಲಿಯೇ :ಅಧಿಕಾರ ಸ್ವೀಕರಿಸಿದ ಸಿಂಗ್ : ಹಂಪಿ ಪ್ರವಾಸಿಗರಿಗೆ ಇಗಲಾದರೂ ದೊರೆಯುವುದೇ ಆನಂದ “ ಶೀರ್ಷಿಕೆಯಡಿ ವರದಿ ಪ್ರಕಟಿಸಲಾಗಿತು.
ಭಾರತೀಯ ಪುರಾತತ್ವ ಇಲಾಖೆ ಹಾಗೂ ರಾಜ್ಯ ಪುರಾತತ್ವ ಇಲಾಖೆ ಗಡಿ ಗುರುತಿಸಿ ನಾಮಫಲಕ ಹಾಕುವುದು, ಹಂಪಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕಾಗಿ ಅವಕಾಶ ನೀಡುವ ಕುರಿತು ನಿಯಮಗಳನ್ನು ಸರಳೀಕರಣ ಮಾಡಿದರೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಿದಂತೆ ಆಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ ಸಚಿವರು ಈ ಸಂಬಂಧ ಚಲನಚಿತ್ರ ನಿರ್ದೇಶಕರನ್ನು ಸೇರಿಸಿ ಸಭೆ ನಡೆಸಲು ತೀರ್ಮಾನಿಸಿದ್ದಾರೆ.
ಪ್ರವಾಸಿಗರಿಗೆ ತೊಂದರೆಯಾಗುವ ಕುಡಿಯುವ ನೀರು, 5 ಕಡೆ ಶೌಚಾಲಯವನ್ನು ಉನ್ನತಿಕರಣ ಮಾಡಲು ಸಚಿವ ಆನಂದಸಿಂಗ್ ಸೂಚಿಸಿದ್ದಾರೆ. ಹಂಪಿ ನೋಡಲು ಬಂದ ಪ್ರವಾಸಿಗರಿಗೆ ಆನ್ ಲೈನ್ ಟಿಕೆಟ್ ಜೊತೆಗೆ ಮ್ಯಾನ್ಯುಯಲ್ ಟಿಕೆಟ್ ಸಹ ದೊರೆಯಬೇಕು ಹಾಗೂ ನೆಟ್ವರ್ಕ್ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲು ನಿರ್ಧರಿಸಲಾಗಿದ್ದು, 3 ಟವರ್ ಸ್ಥಾಪನೆ ಅನುಮತಿ ನೀಡಲಾಗಿದೆ.
ದಕ್ಷಿಣ ಭಾರತದ ರಾಜ್ಯ ಪ್ರವಾಸೋದ್ಯಮ ಸಚಿವರ ಸಭೆ
ದಕ್ಷಿಣ ಭಾರತದ ಎಲ್ಲಾ ರಾಜ್ಯದ ಪ್ರವಾಸೋದ್ಯಮ ಸಚಿವರ ಸಭೆಯನ್ನು ಇದೆ ಅಕ್ಟೋಬರ್ 17 ರಿಂದ 3ದಿನಗಳ ಕಾಲ ಹಂಪಿಯಲ್ಲಿ ಏರ್ಪಡಿಸಲಾಗಿದ್ದು, ಸಭೆಯ ಹಿನ್ನಲೆಯಲ್ಲಿ ಅಗತ್ಯ ವ್ಯವಸ್ಥೆ ಕುರಿತು ಮಾಹಿತಿ ಪಡೆದ ಸಚಿವರು ಉತ್ತಮ ವ್ಯವಸ್ಥೆ ಮಾಡುವುದಕ್ಕೆ ಬೇಕಾದ ಸಲಹೆ ಸೂಚನೆಗಳನ್ನು ನೀಡಿದರು.  ಎಲ್ಲಾ ರಾಜ್ಯಗಳ ಸಮನ್ವಯತೆಯಿಂದ ಹಂಪಿಯ ಪ್ರವಾಸೋದ್ಯಮವನ್ನು ಬೆಳೆಸುವ ಯೋಜನೆ ರೂಪಿಸುವಲ್ಲಿ ಸಭೆ ಸಹಕಾರಿಯಾಗಲಿದೆ ಎಂದರು.
ಕಮಲಪುರದಲ್ಲಿ ಜಿ+1 ಮನೆ ನಿರ್ಮಾಣಕ್ಕೆ ಅನುಮತಿ ಇದೆ. ಅದನ್ನು ಜಿ+2 ಮಾಡಲು ನಿಯಮದಲ್ಲಿ ಸೂಕ್ತ ತಿದ್ದುಪಡಿ ಮಾಡಲು ಹಂಪಿ ವಿಶ್ವ ಪರಂಪರ ಪ್ರದೇಶ ಅಭಿವೃದ್ದಿ ಪ್ರಾಧಿಕಾರಕ್ಕೆ ಮುಂದಾಗಬೇಕು ಎಂದು ಸೂಚನೆಯನ್ನು ನೀಡಿದ್ದಾರೆ ಎನ್ನಲಾಗಿದೆ.
ಈ ಸಂದರ್ಭದಲ್ಲಿ ಸರ್ಕಾರದ ಕಾರ್ಯದರ್ಶಿ ಪಂಕಜ್ ಕುಮಾರ್ ಪಾಂಡೆ, ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕಿ ಸಿಂಧೂ ಬಿ ರೂಪೇಶ್, ಕೆ ಎಸ್ ಟಿ ಡಿ ಸಿ ವ್ಯವಸ್ಥಾಪಕ ನಿರ್ದೇಶಕ ವಿಜಯ ಶರ್ಮ ಮತ್ತು ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.