ಹಂದಿ- ನಾಯಿಗಳ ವೈಜ್ಞಾನಿಕ ನಿರ್ಮೂಲನೆಗೆ ಒತ್ತಾಯ

ದಾವಣಗೆರೆ.ಜೂ.೮; ನಗರದ ಹಳೆ ಭಾಗದಲ್ಲಿ ಮಿತಿ ಮೀರಿದ ನಾಯಿ, ಹಂದಿಗಳ ಕಾಟ ಇದ್ದು,  ಮಹಾನಗರ ಪಾಲಿಕೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ಕೂಡಲೇ ಪಾಲಿಕೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡು ನಾಯಿ ಮತ್ತು ಹಂದಿಗಳನ್ನು ವೈಜ್ಞಾನಿಕವಾಗಿ ನಿರ್ಮೂಲನೆ ಮಾಡಬೇಕೆಂದು ಕರ್ನಾಟಕ ಸೋಷಿಯಲ್ ಸರ್ವಿಸ್ , ಇಂಡಿಯನ್ ಹೆಲ್ಸಿಂಗ್ ಹ್ಯಾಂಡ್ ಸಂಘಟನೆ ಒತ್ತಾಯಿಸಿವೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ ಅಧ್ಯಕ್ಷ ಮಹಮ್ಮದ್ ಹಯಾತ್, ದಾವಣಗೆರೆ ಹಳೆ ಭಾಗದಲ್ಲಿ ನಾಯಿ ಮತ್ತು ಹಂದಿಗಳ ಕಾಟ ಹೆಚ್ಚಾಗಿದೆ. ಅಲ್ಲದೇ  ಸ್ವಚ್ಛತೆ ಇಲ್ಲಿ ಮರೀಚಿಕೆ ಆಗಿದೆ. ಇಂತಹ ಸಮಸ್ಯೆಗಳು ಹಲವಾರು  ವರ್ಷಗಳಿಂದ ಇದ್ದರೂ  ರಾಜಕೀಯ ಇಚ್ಛಾ ಶಕ್ತಿಯ ಕೊರತೆ ಹಾಗೂ ಅಧಿಕಾರಿಗಳ ನಿರ್ಲಕ್ಷತನದಿಂದ ನಗರವು ಸ್ಮಾರ್ಟ್ ಸಿಟಿ ಎನ್ನುವ ಹಂತಕ್ಕೆ ಬಂದರೂ ಸಹ ಸಮಸ್ಯೆಗಳು ಇಂದಿಗೂ ಜೀವಂತವಾಗಿದೆ. ಈಗಾಗಲೇ ಹಳೇ ನಗರದಲ್ಲಿ ನಾಯಿಗಳು ಮಕ್ಕಳ ಮೇಲೆ ಮಾರಣಾಂತಿಕ ದಾಳಿ ನಡೆಸಿವೆ. ಇದೆಲ್ಲವನ್ನೂ ತಿಳಿದಿದ್ದರೂ ಸಹ ಪಾಲಿಕೆಯ ಆಡಳಿತ ಪಕ್ಷ, ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ದೂರಿದರು.ಕಾರಣ‌ ಮುಂದಿನ ದಿನಗಳಲ್ಲಿ ಇಂತಹ ಅಹಿತಕರ ಘಟನೆಗಳು ಸಂಭವಿಸದಂತೆ ಸ್ಥಳಿಯ ಜನಪ್ರತಿನಿಧಿಗಳು ಹಾಗೂ ಮಹಾನಗರ ಪಾಲಿಕೆ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ವಹಿಸಬೇಕು. ಅಹಿತಕರ ಘಟನೆ ನಡೆದ ನಂತರ ಪರಿಹಾರ ಘೋಷಣೆ ಮಾಡುವುದು , ಭರವಸೆ ನೀಡುವುದು , ಇದು ತಾತ್ಕಾಲಿಕ ಪರಿಹಾರ ಮಾತ್ರ. ಇಲ್ಲಿ  ಆಗಬೇಕಾಗಿರುವುದು ಶಾಶ್ವತ ಪರಿಹಾರ. ಈ ನಿಟ್ಟಿನಲ್ಲಿ ಪಾಲಿಕೆಯು ಹಂದಿ, ನಾಯಿಗಳ ಸಂತಾನ ಹರಣ ಯೋಜನೆಯ ಅಡಿಯಲ್ಲಿ ಇವುಗಳ ನಿಯಂತ್ರಣ ಹಾಗೂ ನಿರ್ಮೂಲನೆಗೆ ಮುಂದಾಗಬೇಕು. ಇದನ್ನು ಪಾಲಿಕೆ ಸಮರ್ಪಕವಾಗಿ ನಿರ್ವಹಿಸಬೇಕೆಂದು ಒತ್ತಾಯಿಸಿದರು.ಈಚೆಗೆ ಪಾಲಿಕೆಯ 12 ನೇ ವಾರ್ಡಿನಲ್ಲಿ ಸುಮಾರು 5 ವರ್ಷದ ಬಾಲಕಿ ಮೇಲೆ ನಾಯಿಗಳು ದಾಳಿ ಮಾಡಿದ್ದು,  ಮಗು ಬಾಪೂಜಿ ಮಕ್ಕಳ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸುತ್ತಿದ್ದು , ಲಾಕ್‌ಡೌನ್ ಸಮಯದಲ್ಲಿ ಜೀವನ ನಡೆಸುವುದು ಕಷ್ಟವಾಗಿರುವ ಇಂತಹ ಸಂದರ್ಭದಲ್ಲಿ ಮಗುವಿಗೆ ಚಿಕಿತ್ಸೆ ನೀಡಲು ಪೋಷಕರಿಗೆ ಆರ್ಥಿಕವಾಗಿ ಸಾಧ್ಯವಿಲ್ಲ , ಆದ್ದರಿಂದ ಮಗುವಿನ ಸಂಪೂರ್ಣ ಚಿಕಿತ್ಸೆ ವೆಚ್ಚವನ್ನು ಮಹಾನಗರ ಪಾಲಿಕೆ ಭರಿಸಬೇಕು. ಪರಿಹಾರಕ್ಕಾಗಿ ಹೋರಾಟ ಮಾಡುವ ಸಂದರ್ಭ ನೀಡಬಾರದು. ಈ ಹಿಂದೆ ಪಾಲಿಕೆ ಆಯುಕ್ತರಿಗೆ ಹಂದಿ, ನಾಯಿಗಳ ನಿಯಂತ್ರಣ ಮಾಡಲು ಮನವಿ ಸಲ್ಲಿಸಲು ಹೋದಾಗ ಅವರು ಉಢಾಪೆಯಿಂದ ಮಾತನಾಡಿ ಟಪಾಲಿನಲ್ಲಿ ಹಾಕಿ. ಇಂತಹ ಅರ್ಜಿಗಳು ಸಾವಿರಾರು ಬರುತ್ತವೆ. ಎಲ್ಲವೂ ಪಡೆಯಲು ಆಗುವುದಿಲ್ಲ ಎಂದು ನಿರ್ಲಕ್ಷ್ಯ ಮನೋಭಾವ ತೋರಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.ಸುದ್ದಿಗೋಷ್ಟಿಯಲ್ಲಿ ಅಹಮದ್ ಭಾಷಾ, ವಕೀಲ ಖಲೀಲ್ ಸಾಬ್, ಮಹಮ್ಮದ್ ಅಮೀನ್, ಖಾಸಿಮ್ ಇತರರು ಇದ್ದರು.