ಹಂದಿಗಳ ಹಾವಳಿ ಖಂಡಿಸಿ ಕಲ್ಲಹಂಗರಗಾ ಗ್ರಾ.ಪಂ. ಕಚೇರಿ ಮುಂದೆ ಪ್ರತಿಭಟನೆ

ಕಲಬುರಗಿ:ಜ.2: ಜಂಬಗಾ (ಬಿ) ಗ್ರಾಮದಲ್ಲಿ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲು ಕೋರಿ ಹಾಗೂ ಹಂದಿಗಳ ಹಾವಳಿಯನ್ನು ತಪ್ಪಿಸಿ ಅವುಗಳನ್ನು ನಿಗ್ರಹಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಸೋಮವಾರ ಅಖಿಲ ಭಾರತ ರೈತ, ಕೃಷಿ ಕಾರ್ಮಿಕರ ಸಂಘಟನೆ ಕಾರ್ಯಕರ್ತರು ಕಲ್ಲಹಂಗರಗಾ ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಪ್ರತಿಭಟನಾ ಪ್ರದರ್ಶನ ಮಾಡಿದರು.
ಪ್ರತಿಭಟನೆಕಾರರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ ಅವರು, 6 ತಿಂಗಳ ಹಿಂದೆ ಜಂಬಗಾ (ಬಿ) ಗ್ರಾಮಕ್ಕೆ ಶುದ್ಧ ನೀರಿನ ಘಟಕವನ್ನು ಸ್ಥಾಪಿಸಲು ಆಗ್ರಹಿಸಿ ಮನವಿ ಪತ್ರವನ್ನು ನೀಡಲಾಗಿತ್ತು. ಆದರೆ ಇಲ್ಲಿಯವರೆಗೂ ಗ್ರಾಮ ಪಂಚಾಯತಿಯು ಈ ನಿಟ್ಟಿನಲ್ಲಿ ಯಾವುದೇ ಪ್ರಗತಿಯನ್ನು ಸಾಧಿಸದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಗ್ರಾಮ ಪಂಚಾಯಿತಿಯ ಈ ಬೇಜವಬ್ದಾರಿತನವನ್ನೂ, ಗ್ರಾಮದ ಕುರಿತು ಇರುವ ನಿಷ್ಕಾಳಜಿಯನ್ನು ಖಂಡಿಸುವುದಾಗಿ ತಿಳಿಸಿದರು.
ನೈರ್ಮಲ್ಯದ ಕೊರತೆಯು ಅತಿ ಹೆಚ್ಚು ಇರುವ ಇಂದಿನ ಪರಿಸ್ಥಿತಿಯಲ್ಲಿ ಸ್ವಚ್ಛತೆಯು ಆದ್ಯತೆಯ ಕೆಲಸವಾಗಿರುವುದು ತಮಗೆ ತಿಳಿದಿದೆ. ಇದರ ಕೊರತೆಯಿಂದಲೇ ಹಲವಾರು ಸಾಂಕ್ರಾಮಿಕ ರೋಗಗಳಿಗೆ ಜನರು ತುತ್ತಾಗುತ್ತಿರುವುದು ಶೋಚನೀಯ ಸಂಗತಿಯಾಗಿದೆ. ಆದ್ದರಿಂದ, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜಾಗೃತಿ ಅಭಿಯಾನಗಳು ಹೆಚ್ಚೆಚ್ಚು ನಡೆದು ಜನರಿಗೆ ಸರಿಯಾದ ಜಾಗೃತಿಯನ್ನು ಮೂಡಿಸಲು ಪ್ರಯತ್ನಿಸಬೇಕೆಂದು ನಾವು ತಮ್ಮಲ್ಲಿ ಕೋರುತ್ತೇವೆ. ಅದರೊಂದಿಗೆ ಉತ್ತಮ ಆರೋಗ್ಯಕ್ಕೆ ಮೂಲ ಆಧಾರವಾಗಿರುವ ಕುಡಿಯುವ ನೀರು ಗ್ರಾಮೀಣ ಬಡವರಿಗೆ ಕಡಿಮೆ ದರದಲ್ಲಿ ಸಿಗಬೇಕಾಗಿರುವುದು ಅವಶ್ಯಕವಾಗಿದೆ. ಆದ್ದರಿಂದ ಜಂಬಗಾ ಬಿ. ಗ್ರಾಮದಲ್ಲಿ ಅತಿಹೆಚ್ಚು ರೈತರು ಮತ್ತು ಕೂಲಿ ಕಾರ್ಮಿಕರಿರುವ ಈ ಪ್ರದೇಶದಲ್ಲಿ ಶುದ್ಧ ನೀರಿನ ಘಟಕದ ಅವಶ್ಯಕತೆ ತುಂಬಾ ಇದೆ. ಆದ್ದರಿಂದ, ಮೊದಲ ಆದ್ಯತೆಯ ಮೇರೆಗೆ ಜಂಬಗಾ ಬಿ. ಗ್ರಾಮಕ್ಕೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಬೇಕೆಂದು ಅವರು ಒತ್ತಾಯಿಸಿದರು.
ಇನ್ನೊಂದೆಡೆ, ಗ್ರಾಮದಲ್ಲಿ ನೂರಾರು ಹಂದಿಗಳ ಹಾವಳಿಯಿಂದ ಗ್ರಾಮಸ್ಥರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಗ್ರಾಮದ ನೈರ್ಮಲ್ಯವೂ ಹಾಳಾಗುತ್ತಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಗಳೂ ಇವೆ. ಅಡವಿಯಲ್ಲಿ ಸೇರಿಕೊಂಡಿರುವ ಹಂದಿಗಳಿಂದ ಪ್ರತಿ ವರ್ಷದಂತೆ ಈ ವರ್ಷವೂ ಹಂದಿಗಳ ಹಾವಳಿಯಿಂದ ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿದೆ. ಬೆಳೆ ಕಳೆದುಕೊಂಡ ಗ್ರಾಮದ ರೈತರು ಬೆಳೆಯಿಂದ ಬರಬೇಕಾಗಿದ್ದ ಲಕ್ಷಾಂತರ ರೂ.ಗಳನ್ನು ಕಳೆದುಕೊಳ್ಳುವಂತಾಗಿದೆ. ಆದ್ದರಿಂದ ಗ್ರಾಮದಲ್ಲಿ ಹೆಚ್ಚಾಗಿರುವ ಹಂದಿಗಳ ಕಾಟದಿಂದ ತಪ್ಪಿಸಲು ಅವುಗಳನ್ನು ನಿಗ್ರಹಿಸಬೇಕೆಂದು ಮತ್ತು ಅಡವಿ ಹಂದಿಗಳ ಹಾವಳಿಯನ್ನು ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದರು.
ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಮಹೇಶ್ ಎಸ್.ಬಿ. ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ದೀಪಾ ಡಿಗ್ಗಿಕರ್, ವಿಶ್ವನಾಥ್ ಸಿಂಗೆ ಭೀಮಳ್ಳಿ, ಗ್ರಾಮ ಸಮಿತಿಯ ಅಧ್ಯಕ್ಷ ಗುಂಡೇರಾಯ್ ಪಾಟೀಲ್, ಕಾರ್ಯದರ್ಶಿ ಶರಣಬಸಪ್ಪ ಬಾಬನಗೋಳ್, ಕಲ್ಲಮ್ಮ, ಮಲ್ಲಮ್ಮ ವಾಡಿ ಮುಂತಾದವರು ಪಾಲ್ಗೊಂಡಿದ್ದರು.