ಹಂದರಕಿಯ ಐತಿಹಾಸಿಕ ಲೋಕೇಶ್ವರ ದೇವಾಲಯ

ಗುರುಮಠಕಲ್ ನ 29: ಸೇಡಂ ನಗರದಿಂದ ಯಾದಗಿರಿಗೆ ಸಂಪರ್ಕಿಸುವ ರಾಜ್ಯ ಹೆದ್ದಾರಿ 15ರ ಮೇಲಿರುವ ಹಂದರಕಿ ಗ್ರಾಮವನ್ನು ಶಾಸನಗಳು ‘ಪಂದಿರ್ಕೆ’ ಎಂದೇ ಉಲ್ಲೇಖಿಸಿವೆ. ಬಹುತೇಕ ಈಗಿನ ಚಿತ್ತಾಪುರ ತಾಲ್ಲೂಕನ್ನು ಒಳಗೊಂಡಿರುವ ಪುರಾತನ ಖಾಂಡವ ಮಂಡಲ ಪ್ರದೇಶವು, ‘ಅರಲು ಮೂನ್ನೂರು’ ಎಂಬ 300 ಗ್ರಾಮಗಳನ್ನೊಳಗೊಂಡ ವಿಭಾಗ ಹೊಂದಿದ್ದು, ಈಗಿನ ಅಲ್ಲೂರು(ಬಿ) ಗ್ರಾಮವೇ ಅರಲು ಮುನ್ನೂರು ಗ್ರಾಮಗಳ ವಿಭಾಗೀಯ ಕೇಂದ್ರ ಎಂಬುದು ಇತಿಹಾಸ ತಜ್ಞರ ಅಭಿಪ್ರಾಯ.ಕಲ್ಯಾಣದ ಚಾಲುಕ್ಯರು, ಕಲಚೂರಿಗಳು ಮತ್ತು ಸೇವುಣರ ಕಾಲದಲ್ಲಿ ಅರಲು ಮುನ್ನೂರು ವಿಭಾಗದ ಮಹಾಮಂಡಳೇಶ್ವರರಾಗಿ ಆಳ್ವಿಕೆಯನ್ನು ನಡೆಸಿದ ಹೈಹೇಯ ಮನೆತನದವರು, ಈ ಭಾಗದ ಸಾಂಸ್ಕøತಿಕ ಲೋಕಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ. ಹಂದರಕಿ ಗ್ರಾಮದ ಆನೇಶ್ವರ ದೇಗುಲದಲ್ಲಿರುವ ಕ್ರಿ.ಶ. 1122ರ ಶಾಸನವು,ಹೈಹೇಯ ಮನೆತನದ ಮಹಾಮಂಡಳೇಶ್ವರ ಲೋಕರಸರು ಲೋಕೇಶ್ವರ ದೇವಾಲಯಕ್ಕೆ ನೀಡಿದ ವಿವಿಧ ದತ್ತಿಗಳನ್ನು ಉಲ್ಲೇಖಿಸುತ್ತ ಕುಂತಳ ದೇಶಕ್ಕೆ ‘ಅರಲು ಮುನ್ನೂರು’ ಮುಖವಾಗಿದ್ದರೆ, ಹಂದರಕಿ ಗ್ರಾಮವು ಇದರ ತಿಲಕವಾಗಿತ್ತು ಎಂದು ವರ್ಣಿಸುತ್ತದೆ.
ಶಾಸನಗಳಲ್ಲಿ ಲೋಕೇಶ್ವರ ದೇವಾಲಯ ಎಂದೇ ಉಲ್ಲೇಖಗೊಂಡಿರುವ ಈ ದೇವಾಲಯವು ಈಗಲೂ ಸಹ ಲೋಕೇಶ್ವರ ದೇವಾಲಯ ಎಂದೇ ಕರೆಯಲ್ಪಡುತ್ತದೆ. ಈ ದೇವಾಲಯವು ಗರ್ಭಗೃಹ, ತೆರೆದ ಅಂತರಾಳ, ನವರಂಗ, ಮುಖಮಂಟಪ ಹಾಗೂ ನಂದಿ ಮಂಟಪ ಒಳಗೊಂಡಿದ್ದು ಸುಂದರವಾಗಿದೆ. ಗರ್ಭಗೃಹದಲ್ಲಿ ಪ್ರಾಚೀನ ಶಿವಲಿಂಗವಿದೆ. ತೆರೆದ ಅಂತರಾಳದಲ್ಲಿ ರಾಷ್ಟ್ರಕೂಟರ ಶೈಲಿಯ ದುಂಡನೆಯ ಸ್ತಂಭಗಳಿವೆ.ನವರಂಗದಲ್ಲಿ ಕಲ್ಯಾಣ ಚಾಲುಕ್ಯರ ಶೈಲಿಯ ನಾಲ್ಕು ಕಂಬಗಳಿದ್ದು, ಭುವನೇಶ್ವರಿಯು ಕಮಲಮಯವಾಗಿದೆ. ನವರಂಗದ ಪ್ರವೇಶ ದ್ವಾರದ ಇಕ್ಕೆಲಗಳಲ್ಲಿ ಆಳೆತ್ತರದ ಶೈವ ದ್ವಾರಪಾಲಕರು ನಾಗ, ತ್ರಿಶೂಲ, ಗದೆ, ಅಭಯ ಹಸ್ತ ಮುದ್ರೆಯಲ್ಲಿ ನಿಂತಿರುವ ಮೂರ್ತಿಗಳಿವೆ.ಮುಂಭಾಗದಲ್ಲಿ ಮುಖಮಂಟಪವಿದ್ದು,ಇದಕ್ಕೆ ಎರಡು ಕಡೆ ಪ್ರವೇಶಿಸಲು ಸೋಪಾನಗಳಿವೆ. ಇದರ ಮೇಲೆ ಚಿಕ್ಕದಾದ ನಂದಿ ಮಂಟಪವು ಸಹ ಇದೆ. ದೇವಾಲಯದ ಹೊರಭಿತ್ತಿಯು ಹಾಗೂ ಶಿಖರವನ್ನು ಜೀರ್ಣೋದ್ಧಾರ ಮಾಡಲಾಗಿದೆ.
ಲೋಕೇಶ್ವರ ದೇವಾಲಯದ ಬಲಬದಿಯಲ್ಲಿ ದೇವಾಲಯದ ಗರ್ಭಗೃಹ ಹಾಗೂ ಅಂತರಾಳದ ರಚನೆಯ ಅವಶೇಷಗಳಿರುವ ಭಗ್ನ ದೇವಾಲಯವಿದೆ.ಗರ್ಭಗೃಹದಲ್ಲಿ ಜೋಡಿ ಲಿಂಗಗಳಿರುವುದರಿಂದ ಜೋಡಿಲಿಂಗದ ಗುಡಿ ಎಂದು ಕರೆಯಲಾಗುತ್ತದೆ. ಈ ದೇವಾಲಯದ ಎದುರು ಈಶ್ವರ ದೇಗುಲ ಎಂದು ಕರೆಯುವ ಇನ್ನೊಂದು ದೇಗುಲವು ಸಹ ಇದ್ದು, ಗರ್ಭಗೃಹದಲ್ಲಿ ಶಿವಲಿಂಗವನ್ನು ಹೊಂದಿದೆ.ಗರ್ಭಗೃಹದ ಬಾಗಿಲುಪಂಚಶಾಖಾಲಂಕೃತವಾಗಿದ್ದು ಹೊಸ್ತಿಲಲ್ಲಿ ಆನೆಯ ಶಿಲ್ಪಗಳನ್ನು ಕಂಡರಿಸಲಾಗಿದೆ.ತೆರೆದ ಅಂತರಾಳವಿದ್ದು ಮುಂದಿನ ನವರಂಗ ಭಾಗವು ನಶಿಸಿದೆ. ಸದ್ಯಕ್ಕೆ ಅಧಿಷ್ಠಾನ ಮಾತ್ರ ಉಳಿದಿದೆ. ದೇವಾಲಯದ ವಾಯುವ್ಯ ಭಾಗದಲ್ಲಿ ಪುರಾತನ ಬಾವಿಯು ಸಹ ಇದೆ.
ಹಂದರಕಿಯ ಲೋಕೇಶ್ವರ ದೇವಾಲಯಕ್ಕೆ ಅರಲು ಮೂನ್ನೂರಿನ ಮಹಾಮಂಡಳೇಶ್ವರ ಲೋಕರಸರು ಸುಮಾರು 1000 ಮತ್ತರು ಹೊಲವನ್ನು ಉಂಬಳಿಯಾಗಿ ಹಾಗೂ ಇತರೆ ದತ್ತಿಗಳನ್ನು ನೀಡಿರುವ ಬಗ್ಗೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ. ಈ ಲೋಕೇಶ್ವರ ದೇವಾಲಯವನ್ನು ಲೋಕರಸರು ಕಟ್ಟಿರಬಹುದು ಎನ್ನುವ ಅಭಿಪ್ರಾಯವು ಇದೆ. ಜಿಲ್ಲೆಯ ಚಾರಿತ್ರಿಕ ಹಿನ್ನೆಲೆಯನ್ನು ದರ್ಶಿಸುವ ಹಂದರಕಿ ಗ್ರಾಮದ ಆನೇಶ್ವರ ಹಾಗೂ ಲೋಕೇಶ್ವರ ದೇವಾಲಯಗಳನ್ನು ನೀವು ಸಹ ಅವಕಾಶ ಸಿಕ್ಕರೆ ಒಮ್ಮೆ ಭೇಟಿ ನೀಡಿ ಕಣ್ತುಂಬಿಸಿಕೊಳ್ಳಲು ಮರೆಯದಿರಿ.