ಹಂತ ೫: ಮತದಾನ ಬಿರುಸು

ನವದೆಹಲಿ,ಮೇ.೨೦- ತೀವ್ರ ಕುತೂಹಲ ಕೆರಳಿಸಿರುವ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಇಂದು ಐದನೇ ಹಂತದ ಮತದಾನ ಶಾಂತಿಯುತ ಮತ್ತು ಚುರುಕಿನಿಂದ ಸಾಗಿದೆ. ಮಧ್ಯಾಹ್ನದ ವೇಳೆಗೆ ಶೇ. ೪೦ ರಿಂದ ೪೫ರಷ್ಟು ಮತದಾನವಾಗಿದೆ. ಮಧ್ಯಾಹ್ನದ ವೇಳೆಗೆ ಮಹಾರಾಷ್ಟ್ರದಲ್ಲಿ ಅತ್ಯಂತ ಕಡಿಮೆ ಮತದಾನವಾಗಿದ್ದರೆ, ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಮತದಾನವಾಗಿದೆ.
ದೇಶದ ೬ ರಾಜ್ಯಗಳು ಮತ್ತು ೨ ಕೇಂದ್ರಾಡಳಿತ ಪ್ರದೇಶದ ೪೯ ಲೋಕಸಭಾ ಕ್ಷೇತ್ರಗಳಿಗೆ ಬಿರುಸಿನಿಂದ ಮತದಾನ ನಡೆದಿದೆ. ರಾಹುಲ್ ಗಾಂಧಿ, ಸ್ಮೃತಿ ಇರಾನಿ, ಚಿರಾಗ್ ಪಾಸ್ವಾನ್ ಮತ್ತು ಒಮರ್ ಅಬ್ದುಲ್ಲಾ ಸೇರಿದಂತೆ ಹಲವು ಕೇಂದ್ರ ಸಚಿವರು ಮತ್ತು ಪ್ರಾದೇಶಿಕ ಪಕ್ಷದ ಮುಖ್ಯಸ್ಥರು ಸೇರಿದಂತೆ ೬೯೫ ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ.
ಜಾರ್ಖಂಡ್‌ನ ತಲಾ ೩ ಲೋಕಸಭಾ ಕ್ಷೇತ್ರ, ಮಹಾರಾಷ್ಟ್ರ ೧೩, ಒಡಿಶಾ ೫, ಉತ್ತರ ಪ್ರದೇಶ ೧೪, ಪಶ್ಚಿಮ ಬಂಗಾಳ ೭ ಮತ್ತು ಎರಡು ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ತಲಾ ಒಂದು ಲೋಕಸಭೆ ಸ್ಥಾನಗಳಿಗೆ ಬಿಗಿಭದ್ರತೆಯಲ್ಲಿ ಮತದಾನ ಸಾಗಿದೆ.
ಈ ಹಂತ ಮುಕ್ತಾಯದೊಂದಿಗೆ ಮಹಾರಾಷ್ಟ್ರ ಮತ್ತು ಲಡಾಖ್‌ನಲ್ಲಿ ಚುನಾವಣೆ ಪ್ರಕ್ರಿಯೆ ಮುಗಿಯಲಿದೆ. ಬೆಳಿಗ್ಗೆಯಿಂದಲೇ ಮತದಾರರು ಸರದಿ ಸಾಲಿನಲ್ಲಿ ನಿಂತು ತಮ್ಮ ಸಂವಿಧಾನ ಬದ್ಧ ಹಕ್ಕು ಚಲಾವಣೆ ಮಾಡಿದರು. ಮೊದಲ ಬಾರಿಗೆ ಮತ ಚಲಾಯಿಸುತ್ತಿರುವ ಯುವಕರು, ಯುವತಿಯರು, ಅತ್ಯಂತ ಉತ್ಸಾಹದಿಂದ ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು. ಇದೇ ವೇಳೆ ಒಡಿಶಾ ವಿಧಾನಸಭೆಯ ೩೫ ಸ್ಥಾನಗಳಿಗೆ ಮತದಾನ ನಡೆದಿದೆ.
ಈ ಹಂತದಲ್ಲಿ ಕಡಿಮೆ ಸಂಖ್ಯೆಯ ಸ್ಥಾನ ಹೊಂದಿದ್ದರೂ, ಹೆಚ್ಚಿನ ಕೇಂದ್ರ ಸಚಿವರು ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ನಾಯಕರು ಸ್ಪರ್ಧಿಸಿದ್ದಾರೆ. ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾ ಆಯೋಗ ಎಲ್ಲಾ ವ್ಯಾಪಕ ಭದ್ರತಾ ವ್ಯವಸ್ಥೆ ಕೈಗೊಂಡಿತ್ತು.
ಪಶ್ಚಿಮ ಬಂಗಾಳದ ಏಳು ಸ್ಥಾನಗಳು ಮತ್ತು ಮಹಾರಾಷ್ಟ್ರದ ೧೩ ಸ್ಥಾನಗಳಲ್ಲಿ ಗೆಲುವಿಗಾಗಿ ರಾಜಕೀಯ ಪಕ್ಷಗಳಲ್ಲಿ ತೀವ್ರ ಪೈಪೋಟಿ ನಡೆದಿದೆ. ಮಹಾರಾಷ್ಟ್ರದ ೧೩ ಸ್ಥಾನಗಳಲ್ಲಿ ಹತ್ತು ಶಿವಸೇನೆಯ ಹಾಲಿ ಸಂಸದರಿದ್ದಾರೆ. ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಪಕ್ಷದ ಎರಡು ಬಣ ಹಾಗು ಇಂಡಿಯಾ ಮೈತ್ರಿಕೂಟ ಹೆಚ್ಚಿನ ಸ್ಥಾನ ಗೆಲ್ಲುವತ್ತ ಚಿತ್ತ ಹರಿಸಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದೆ. ಇದರ ಜೊತೆಗೆ ಕಾಂಗ್ರೆಸ್ ಮತ್ತು ಸಿಪಿಎಂನೊಂದಿಗೆ ಹಲವು ಸ್ಥಾನಗಳಲ್ಲಿ ಕಠಿಣ ಹೋರಾಟ ಏರ್ಪಟ್ಟಿದೆ.
೫೮ ಸ್ಥಾನಗಳನ್ನು ಒಳಗೊಂಡ ಮುಂದಿನ ಮತ್ತು ಅಂತಿಮ ಹಂತದ ಮತದಾನ ಮೇ ೨೫ ರಂದು ನಡೆಯಲಿದೆ. ರಾಷ್ಟ್ರ ರಾಜಧಾನಿ ದೆಹಲಿ ಮತ್ತು ನೆರೆಯ ಹರಿಯಾಣದಲ್ಲಿ ಒಂದೇ ಹಂತದ ಮತದಾನದ ನಡೆಯಲಿದೆ.. ಜೂನ್ ೪ ರಂದು ಮತ ಎಣಿಕೆ ನಡೆಯಲಿದೆ.

ಗಣ್ಯರ ಮತದಾನ
ಐದನೇ ಹಂತಕ್ಕೆ ನಡೆಯುತ್ತಿರುವ ಮತದಾನದಲ್ಲಿ ಬಾಲಿವುಡ್ ನಟರಾದ ಅಕ್ಷಯ್ ಕುಮಾರ್, ರಣಬೀರ್ ಕಪೂರ್, ಫರ್ಹಾನ್ ಅಕ್ತರ್, ನಿರ್ದೇಶಕಿ ಜೋಯಾ ಅಕ್ತರ್, ನಟಿ ಜಾನ್ವಿ ಕಪೂರ್ ಸೇರಿದಂತೆ ಹಲವು ನಟ ನಟಿಯರು, ರಾಜಕೀಯ ಮುಖಂಡರರು ಮತ್ತು ಕಣದಲ್ಲಿರುವ ಅಭ್ಯರ್ಥಿಗಳು ಮತ ಚಲಾಯಿಸಿ ಮತದಾನ ಮಾಡುವಂತೆ ಮನವಿ ಮಾಡಿದ್ದಾರೆ. ಈ ಮಧ್ಯೆ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ತಮ್ಮ ಹಕ್ಕನ್ನು ಚಲಾಯಿಸಿದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ, ಮತದಾನ ಮಾಡಿದರು.

ಕಣದಲ್ಲಿರುವ ಪ್ರಮುಖರು
ಈ ಹಂತದ ಲೋಕಸಭೆ ಚುನಾವಣೆಯಲ್ಲಿ ವಿವಿಧ ಪಕ್ಷಗಳ ಪ್ರಮುಖ ಅಭ್ಯರ್ಥಿಗಳಲ್ಲಿ ಕೇಂದ್ರ ಸಚಿವರಾದ ಪಿಯೂಷ್ ಗೋಯಲ್ (ಮುಂಬೈ ಉತ್ತರ), ಭಾರತಿ ಪವಾರ್ (ದಿಂಡೋರಿ), ಸ್ಮೃತಿ ಇರಾನಿ (ಅಮೇಥಿ), ರಾಜನಾಥ್ ಸಿಂಗ್ (ಲಖನೌ) ಸೇರಿದ್ದಾರೆ.
ಪ್ರಮುಖ ಮಿತ್ರಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್ ಮುಖ್ಯಸ್ಥ ಚಿರಾಗ್ ಪಾಸ್ವಾನ್ (ಹಾಜಿಪುರ), ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ (ಕಲ್ಯಾಣ್) ಅವರ ಪುತ್ರ ಶ್ರೀಕಾಂತ್ ಶಿಂಧೆ ಸೇರಿದ್ದಾರೆ.
ವಿರೋಧ ಪಕ್ಷದಿಂದ, ಕಾಂಗ್ರೆಸ್‌ನ ರಾಹುಲ್ ಗಾಂಧಿ, ತಾಯಿ ಸೋನಿಯಾ ಗಾಂಧಿ ಪ್ರತಿನಿಧಿಸಿದ್ದ ರಾಯ್ ಬರೇಲಿ ಕ್ಷೇತ್ರದಿಂದ ಕಣಕ್ಕಿಳಿದಿದ್ದು ಕ್ಷೇತ್ರ ಉಳಿಸಿಕೊಳ್ಳಲು ಯತ್ನ ನಡೆಸಿದ್ದಾರೆ.
ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಪುತ್ರಿ ರೋಹಿಣಿ ಆಚಾರ್ಯ ಬಿಜೆಪಿಯ ಮಾಜಿ ಕೇಂದ್ರ ಸಚಿವ ರಾಜೀವ್ ಪ್ರತಾಪ್ ರೂಡಿ ವಿರುದ್ಧ ಸರನ್‌ನಿಂದ ಸ್ಪರ್ಧಿಸುತ್ತಿದ್ದಾರೆ; ಶಿವಸೇನೆ-ಯುಬಿಟಿ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಅರವಿಂದ್ ಸಾವಂತ್ ಮುಂಬೈ ದಕ್ಷಿಣದಿಂದ ಸ್ಪರ್ಧಿಸಿದ್ದಾರೆ.

ಮೋದಿ ಮನವಿ
ಐದನೇ ಹಂತದ ಲೋಕಸಭೆ ಚುನಾವಣೆಗೆ ಮತದಾರರು ದಾಖಲೆ ಸಂಖ್ಯೆಯಲ್ಲಿ ಮತದಾನ ಮಾಡುವಂತೆ ಮತದಾರರಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
ಸೋಮವಾರ ಈ ಕುರಿತು ಎಕ್ಸ್ ಖಾತೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಜಾಪ್ರಭುತ್ವದ ಹಬ್ಬದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಹಿಳೆಯರು ಮತ್ತು ಯುವ ಮತದಾರರಿಗೆ ವಿಶೇಷ ಮನವಿ ಮಾಡಿದರು.
೨೦೨೪ರ ಲೋಕಸಭೆ ಚುನಾವಣೆಯ ೫ನೇ ಹಂತದಲ್ಲಿ ೮ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ ೪೯ ಸ್ಥಾನಗಳಿಗೆ ಇಂದು ಮತದಾನ ನಡೆಯುತ್ತಿದ್ದು,
ಇಂದು ಮತದಾನ ಮಾಡುತ್ತಿರುವ ಎಲ್ಲ ಕ್ಷೇತ್ರಗಳಿಗೆ ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ. ವಿಶೇಷವಾಗಿ ಮಹಿಳೆಯರು ಮತ್ತು ಯುವ ಮತದಾರರು ಭಾಗವಹಿಸುವಂತೆ ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.