ಹಂತಕರ ಎನ್‌ಕೌಂಟರ್‌ಗೆ ಸರ್ಕಾರ ಸಿದ್ಧ

ರಾಮನಗರ, ಜು.೨೯- ಮಂಗಳೂರಿನಲ್ಲಿ ಅಮಾಯಕರ ಹತ್ಯೆ ಮಾಡಿದವರ ವಿರುದ್ಧ ಎನ್‌ಕೌಂಟರ್ ಸೇರಿದಂತೆ ಯಾವುದೇ ಕಠಿಣಕ್ರಮಕ್ಕೆ ಸರ್ಕಾರ ಸಿದ್ಧವಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದರು.
ರಾಮನಗರದಲ್ಲಿಂದು ಗಾಳಿಪಟ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ಕಾರಣಕ್ಕೂ ಕೊಲೆಗಡುಕರು, ದುಷ್ಕರ್ಮಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಅಮಾಯಕರ ಜೀವ ರಕ್ಷಣೆ ನಮ್ಮ ಕರ್ತವ್ಯ. ಅಗತ್ಯ ಬಿದ್ದರೆ ಎನ್‌ಕೌಂಟರ್ ಕಾಲವೂ ಬರಲಿದೆ ಎಂದರು.
ಬಿಜೆಪಿ ಕಾರ್ಯಕರ್ತರ ಆಕ್ರೋಶ ಈ ಸಂದರ್ಭದಲ್ಲಿ ಸಹಜ, ಈಗಾಗಲೇ ಕೆಲವರನ್ನು ಬಂಧಿಸಲಾಗಿದೆ. ಅಗತ್ಯ ಬಿದ್ದರೆ ಯುಪಿ ಮಾದರಿ ಅಷ್ಟೇ ಅಲ್ಲ, ಅದಕ್ಕಿಂತಲೂ ೫ ಹೆಜ್ಜೆ ಮುಂದೆ ಹೋಗಿ ಕ್ರಮಕೈಗೊಳ್ಳುತ್ತೇವೆ ಎಂದರು.
ಪಿಎಫ್‌ಐ, ಎಸ್‌ಡಿಪಿಐ ನಿಷೇಧದ ಬಗ್ಗೆ ಕಾಂಗ್ರೆಸ್‌ನ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್‌ನ ಸೃಷ್ಟೀಕರಣ ರಾಜಕಾರಣವೇ ಇದಕ್ಕೆಲ್ಲ ಕಾರಣ, ಅವರಿಗೂ ದೇಶದ್ರೋಹಿಗಳಿಗೂ ವ್ಯತ್ಯಾಸವಿಲ್ಲ ಎಂದು ಕಿಡಿಕಾರಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಮ್ಮನ್ನು ಇಡಿ ಬಲೆಯಲ್ಲಿ ಸಿಲುಕಿಸಲಾಗುತ್ತಿದೆ ಎಂದು ಡಿ.ಕೆ ಶಿವಕುಮಾರ್ ಅವರು ಮಾಡಿರುವ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಭ್ರಷ್ಟಾಚಾರ ಡಿಕೆಶಿ ಸಂಸ್ಕೃತಿ, ಅವರ ಖೆಡ್ಡಾ ಅವರೇ ತೋಡಿಕೊಂಡಿದ್ದಾರೆ. ನಾವೇನು ಮಾಡುವ ಅಗತ್ಯವಿಲ್ಲ ಎಂದರು.