ಹಂಟಿಂಗ್ ಸ್ಪೆಷಲಿಸ್ಟ್ ರಾಣಾ ಸಹಾಯದಿಂದ ಬೇಟೆಗಾರರು ಸೆರೆ

ಚಾಮರಾಜನಗರ, ಜೂ.04- ಬೇಟೆಯಾಡಿದ ಮೊಲ ಮಾಂಸ ತಿನ್ನುತ್ತಾ ಮತ್ತೊಂದು ಬೇಟೆಗೆ ಹೊಂಚು ಹಾಕುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಹಂಟಿಂಗ್ ಸ್ಪೆಷಲಿಸ್ಟ್ ರಾಣಾ ಸಹಾಯದಿಂದ ಸೆರೆ ಹಿಡಿದಿರುವ ಘಟನೆ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಜಿ.ಎಸ್. ಬೆಟ್ಟ ವಲಯದ ಕುರುಬನಕೆರೆ ಕಟ್ಟೆಯ ಬಳಿ ನಡೆದಿದೆ.
ಮೊಲ ಬೇಟೆಗಾರರು ಗುಂಡ್ಲುಪೇಟೆ ತಾಲೂಕಿನ ಚೆನ್ನಿಕಟ್ಟೆ ಗ್ರಾಮದ ಬಸಪ್ಪ, ಪುಟ್ಟರಾಜು ಬಂಧಿತ ಆರೋಪಿಗಳು. ಇದೇ ಗ್ರಾಮದ ಗೋಪಾಲ, ಕೃಷ್ಣ, ಬಸವರಾಜು ಎಂಬ ಮೂವರು ಆರೋಪಿಗಳು ಪರಾರಿಯಾಗಿದ್ದು, ಇವರ ಪತ್ತೆಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದಾರೆ.
ಕೆರೆಯ ಬಳಿ ಮೊಲಗಳಿಗೆಂದು ಹಾಕಿದ್ದ 15ಕ್ಕೂ ಹೆಚ್ಚು ಉರುಳುಗಳು ಗಸ್ತಿನ ವೇಳೆ ಪತ್ತೆಯಾಗಿವೆ. ಬಳಿಕ, ಪೆÇಲೀಸ್ ಶ್ವಾನ ಹಂಟಿಗ್ ಸ್ಪೆಷಲಿಸ್ಟ್ ರಾಣಾನನ್ನು ಸ್ಥಳಕ್ಕೆ ಕರೆದೊಯ್ದು ಪರಿಶೀಲಿಸಲಾಗಿದೆ. ಶ್ವಾನ ಕೆರೆ ಬಳಿ ಸುತ್ತುತ್ತಿತ್ತು. ಬಳಿಕ, ಅರಣ್ಯಾಧಿಕಾರಿಗಳು ಅಲ್ಲೇ ಮೊಕ್ಕಾಂ ಹೂಡಿ ಪೆÇದೆಯ ಬಳಿ ಅವಿತು ಕುಳಿತಿದ್ದಾರೆ. ಈ ವೇಳೆ ಬೇಟೆಯಾಡಿದ್ದ ಮೊಲದ ಮಾಂಸದಿಂದ ಸಾರು ತಯಾರಿಸಿ ತಿನ್ನುತ್ತಾ ಕುಳಿತಿದ್ದ ಆರೋಪಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ. ಈ ವೇಳೆ ಮೂವರು ಪರಾರಿಯಾಗಿದ್ದು, ಅವರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
‘ಕಾಡುಗಳ್ಳರ ಹಂಟರ್’ ಬಂಡೀಪುರದ ರಾಣಾ : ಕ್ಷಣಾರ್ಧದಲ್ಲಿ ಕಾಡುಗಳ್ಳರನ್ನು, ನಾಡಿಗೆ ಬಂದ ವನ್ಯಜೀವಿಗಳ ಇರುವಿಕೆಯನ್ನು ಪತ್ತೆ ಹಚ್ಚುತ್ತದೆ ಬಂಡೀಪುರ ಹುಲಿ ಸುರಕ್ಷಿತ ಪ್ರದೇಶದ ಸ್ಪೆಷಲ್ ಇನ್ವೆಸ್ಟಿಗೇಟರ್ ರಾಣಾ. ಇದು ಜರ್ಮನ್ ಶಫರ್ಡ್ ಜಾತಿಯ ಶ್ವಾನವಾಗಿದ್ದು, 9 ತಿಂಗಳು ಮಧ್ಯಪ್ರದೇಶದಲ್ಲಿ ತರಬೇತಿ ಪಡೆದಿತ್ತು. ಬಂಡೀಪುರ ಅರಣ್ಯ ಪ್ರದೇಶದಲ್ಲಿ ತೇಗ, ಹೊನ್ನೆಯಂತಹ ಸಂಪದ್ಭರಿತ ಮರಗಳಿದ್ದು, ಇವುಗಳ ಮೇಲೆ ಯಾವಾಗಲೂ ಇರುತ್ತಿದ್ದ ಮರಗಳ್ಳರ ಕಣ್ಣು ಈಗ ರಾಣಾನಿಂದ ತಪ್ಪಿದೆ ಎಂದರೆ ಅತಿಶಯೋಕ್ತಿಯಲ್ಲ. ಯಾವುದೇ ಡಿಸ್ಟರ್ಬೆನ್ಸ್ ಇಲ್ಲಾಂದ್ರೆ 30-40 ಕಿ.ಮೀ. ದೂರದವರೆಗೂ ವಾಸನೆ ಮೂಲಕವೇ ಕಳ್ಳರನ್ನು ಹಿಡಿಯುತ್ತಾನೆ ರಾಣಾ.