ಹಂಚಿನಾಳ-ಮಾವನೂರು ರಸ್ತೆ ದುರಸ್ತಿಗೆ ಒತ್ತಾಯ

ಜೇವರ್ಗಿ,ಸೆ.12-ತಾಲ್ಲೂಕಿನ ಹಂಚಿನಾಳ-ಮಾವನೂರು ರಸ್ತೆ ಹದಗೆಟ್ಟು ಹೋಗಿದ್ದು, ಜನರ ಹಾಗೂ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯುಂಟಾಗುತ್ತಿದೆ.
ಮಾವನೂರು ಗ್ರಾಮದಿಂದ ಹಂಚಿನಾಳ ಗ್ರಾಮಕ್ಕೆ, ಹಂಚಿನಾಳ ಗ್ರಾಮದಿಂದ ಮಾವನೂರ ಗ್ರಾಮಕ್ಕೆ ನಿತ್ಯ ನೂರಾರು ಜನ ತಮ್ಮ ಕೆಲಸ ಕಾರ್ಯಗಳಿಗಾಗಿ ಓಡಾಡುತ್ತಾರೆ. ಆದರೆ ರಸ್ತೆ ಸಂಪೂರ್ಣ ಹದಗೆಟ್ಟು ಹೋಗಿ ಕೆಸರು ಗದ್ದೆಯಾಗಿರುವುದರಿಂದ ಜನರ ಓಡಾಟಕ್ಕೆ ತೊಂದರೆಯುಂಟಾಗಿದೆ. ಮಳೆಗಾಲದ ಸಂದರ್ಭದಲ್ಲಂತೂ ಈ ರಸ್ತೆಯಲ್ಲಿ ಹಾದು ಹೋಗುವುದೇ ದುಸ್ತರವಾದಂತಾಗಿದೆ. ಹದಗೆಟ್ಟು ಹೋಗಿರುವ ರಸ್ತೆಯನ್ನು ದುರಸ್ತಿಗೊಳಿಸಿ ಜನರ ಓಡಾಟಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಗ್ರಾಮದ ಹಿರಿಯ ಮುಖಂಡರಾದ ಶರಣಪ್ಪ ಮಾವನೂರು ಜಿಲ್ಲಾ ಗ್ರಂಥಾಲಯ ಸಂಘದ ಜಿಲ್ಲಾ ಅಧ್ಯಕ್ಷ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ನಿರ್ಲಕ್ಷಿಸಿದರೆಪ್ರತಿಭಟನೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.