
ದೇವದುರ್ಗ,ಜ.೧೧- ಕುಡಿವ ಪರದಾಡುತ್ತಿದ್ದ ತಾಲೂಕಿನ ಹಂಚಿನಾಳಗೆ ಕೊನೆಗೂ ಶಾವಂತಗೇರಾ ಗ್ರಾಪಂ ಕುಡಿವ ನೀರು ಪೂರೈಸಲು ಮುಂದಾಗಿದೆ. ಎರಡು ಕಡೆ ಬೋರ್ವೆಲ್ ಕೊರೆಸಿ ದಾಹ ನೀಗಲು ಕ್ರಮಕೈಗೊಂಡಿದೆ.
ಹಂಚಿನಾಳ ಹಾಗೂ ಶಾವಂಗೇರಾದಲ್ಲಿ ಸೋಮವಾರ ತಲಾ ಒಂದು ಬೋರ್ವೆಲ್ ಕೊರೆದಿದೆ. ಹಂಚಿನಾಳದಲ್ಲಿ ಒಂದಿಂಚು ನೀರು ಬಿದ್ದಿದ್ದು, ಕೈಪಂಪ್ ಅಳವಡಿಸಿ, ಶಾವಂಗೇರಾದಲ್ಲಿ ಬಿದ್ದ ಎರಡೂವರೆಗೆ ಇಂಚು ನೀರು ಈ ಹಿಂದೆ ಹಾಕಿದೆ ಪೈಪ್ಲೈನ್ ಮೂಲಕ ನೀರು ಪೂರೈಕೆ ಮಾಡಲು ಗ್ರಾಪಂ ಸಿದ್ದತೆ ಮಾಡಿಕೊಂಡಿದೆ.
ಗ್ರಾಮಕ್ಕೆ ಈ ಹಿಂದೆ ಶಾವಂತಗೇರಾದ ರೈತ ಮಲ್ಲಪ್ಪಗೌಡ ಬೋರ್ವೆಲ್ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ನೀರು ಪೂರೈಕೆ ಅವಧಿ ಮುಗಿದಿದ್ದರಿಂದ ರೈತ ನೀರು ಬಂದ್ ಮಾಡಿದ್ದ. ಹಲವು ದಿನಗಳಿಂದ ಗ್ರಾಮಕ್ಕೆ ನೀರಿನ ಸಮಸ್ಯೆಯಾಗಿತ್ತು. ಈ ಕುರಿತು ಸಂಜೆ ವಾಣಿ ಪತ್ರಿಕೆ ವರದಿ ಪ್ರಕಟಿಸಿ ಸಮಸ್ಯೆ ಮೇಲೆ ಬೆಳಕು ಚೆಲ್ಲಿತ್ತು. ಇದರಿಂದ ಎಚ್ಚೆತ್ತ ಗ್ರಾಪಂ ಎರಡು ಬೋರ್ವೆಲ್ ಕೊರೆಸಿದೆ.
ಹಂಚಿನಾಳಗೆ ನೀರು ಪೂರೈಕೆ ಮಾಡುತ್ತಿದ್ದ ರೈತ ಮಲ್ಲಪ್ಪಗೌಡ ಜತೆ ಗ್ರಾಮಸ್ಥರು ಮಾತನಾಡಿ ನೀರು ತರುವಲ್ಲಿ ಯಶಸ್ವಿಯಾಗಿದ್ದಾರೆ. ಮಲ್ಲಪ್ಪಗೌಡರ ಹೊಲದಲ್ಲಿ ಹೊಸ ಬೋರ್ವೆಲ್ ಕೊರೆಸಿ ನೀರು ಪೂರೈಕೆ ಮಾಡಲು ಮುಂದಾಗಿದೆ. ಸದ್ಯ ಅಮರಯ್ಯಸ್ವಾಮಿ ವಾಟರ್ಮ್ಯಾನ್ಆಗಿದ್ದು, ೨ವರ್ಷಗಳ ನಂತರ ನಿವೃತ್ತಿಯಾಗಲಿದ್ದಾರೆ. ಅವರ ಜಾಗಕ್ಕೆ ಮಲ್ಲಪ್ಪಗೌಡರ ಕುಟುಂಬಕ್ಕೆ ಕೆಲಸ ನೀಡಲು ಗ್ರಾಮಸ್ಥರು ಮೌಖಿಕ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸಬೋರ್ ಕೊರೆದು ನೀರು ಪೂರೈಸಲು ರೈತ ಮಲ್ಲಪ್ಪಗೌಡ ಒಪ್ಪಿದ್ದಾರೆ.
ಪಿಡಿಒ ಗುರುಲಿಂಗಯ್ಯ, ಗ್ರಾಮಸ್ಥರಾದ ಈರಪ್ಪಗೌಡ ಪೊಪಾ, ಸುಗೂರೆಡ್ಡಿಗೌಡ ಕೂಡ್ಲಿಗಿ, ನಾಗರಾಜ ಪಾಟೀಲ್, ನಾಗಪ್ಪ ನಾಯಕ, ರೆಡ್ಡಪ್ಪ ನಾಯಕ ಇದ್ದರು.
ಕೋಟ್====
ಶಾವಂತಗೇರಾ ರೈತ ಮಲ್ಲಪ್ಪಗೌಡ ಜತೆ ಮಾತುಕತೆ ನಡೆಸಿ ಅವರ ಹೊಲದಲ್ಲಿ ಹೊಸಬೋರ್ ಕೊರೆದಿದ್ದು, ಎರಡೂವರೆ ಇಂಚು ನೀರುಬಿದ್ದಿದೆ. ಹಂಚಿನಾಳ ಬೋರ್ವೆಲ್ಗೆ ಕೈಪಂಪ್ ಅಳವಡಿಸಿ, ಶಾವಂತಗೇರಾ ಬೋರ್ವೆಲ್ ನೀರು ಪೈಪ್ಲೈನ್ನಿಂದ ಪೂರೈಕೆ ಮಾಡಲಾಗುವುದು. ರೈತನಿಗೆ ಮುಂದಿನ ದಿನಗಳಲ್ಲಿ ಅನುಕೂಲ ಕಲ್ಪಿಸುತ್ತೇವೆ.
| ರಾಚೋಟಪ್ಪಗೌಡ ಮಸರಕಲ್
ಹಂಚಿನಾಳದ ಹಿರಿಯ ಮುಖಂಡ