ಹಂಗೆರಿಗೆ ಅಗಮಿಸಿದ ಜಿನ್‌ಪಿಂಗ್

ಬುಡಾಪೆಸ್ಟ್ (ಹಂಗೆರಿ), ಮೇ ೯- ಈಗಾಗಲೇ ಸರ್ಬಿಯಾ ಪ್ರವಾಸವನ್ನು ಮುಗಿಸಿರುವ ಚೀನಾ ಅಧ್ಯಕ್ಷ ಕ್ಷೀ ಜಿನ್‌ಪಿಂಗ್ ಇದೀಗ ಯುರೋಪಿಯನ್ ಯೂನಿಯನ್‌ನ ಪ್ರಮುಖ ರಾಷ್ಟ್ರಗಳಲ್ಲಿ ಒಂದಾಗಿರುವ ಹಂಗೆರಿಗೆ ಭೇಟಿ ನೀಡಿದ್ದಾರೆ.
ಈಗಾಗಲೇ ಚೀನಾ ಹಾಗೂ ಹಂಗೆರಿ ನಡುವಿನ ಸಂಬಂಧದಲ್ಲಿ ಭಾರೀ ಗಾಢವಾಗಿದೆ. ಅದರಲ್ಲೂ ಕ್ಸಿ ಅವರ ಮೂರು ದಿನಗಳ ಹಂಗೇರಿ ಭೇಟಿಯು ಉಭಯ ದೇಶಗಳ ನಡುವಿನ ೭೫ ವರ್ಷಗಳ ರಾಜತಾಂತ್ರಿಕ ಸಂಬಂಧಗಳನ್ನು ಸೂಚಿಸುತ್ತದೆ. ಚೀನಾ ಅಧ್ಯಕ್ಷ ಅವರು ಹಂಗೇರಿಯ ಪ್ರಧಾನಿ ವಿಕ್ಟರ್ ಓರ್ಬನ್ ಅವರೊಂದಿಗೆ ಭೋಜನಕೂಟದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ. ಇನ್ನು ಫ್ರಾನ್ಸ್‌ಗೆ ಭೇಟಿ ನೀಡುವ ಮೂಲಕ ಯುರೋಪ್ ಪ್ರವಾಸವನ್ನು ಆರಂಭಿಸಿದ್ದ ಜಿನ್‌ಪಿಂಗ್, ಬಳಿಕ ಸರ್ಬಿಯಾಗೆ ಭೇಟಿ ನೀಡಿದ್ದರು. ಸದ್ಯ ಹಂಗೆರಿಗೆ ಆಗಮಿಸಿದ್ದಾರೆ. ಹಂಗೆರಿ ಹಾಗೂ ಸರ್ಬಿಯಾ ಎರಡೂ ದೇಶಗಳು ಚೀನಾ ಹಾಗೂ ರಷ್ಯಾ ಜೊತೆ ಉತ್ತಮ ಸಂಬಂಧವನ್ನು ಹೊಂದಿದೆ. ಚೀನಾವು ಸರ್ಬಿಯಾ ಮತ್ತು ನೆರೆಯ ಬಾಲ್ಕನ್ ದೇಶಗಳಲ್ಲಿ ವಿಶೇಷವಾಗಿ ಗಣಿಗಾರಿಕೆ ಮತ್ತು ಉತ್ಪಾದನೆಗೆ ಭಾರೀ ಮೊತ್ತವನ್ನು ಸುರಿದಿದ್ದು, ಅಲ್ಲದೆ ಕಳೆದ ವರ್ಷ ಬೀಜಿಂಗ್ ಮತ್ತು ಬೆಲ್‌ಗ್ರೇಡ್ (ಸರ್ಬಿಯಾ) ನಡುವೆ ಮುಕ್ತ-ವ್ಯಾಪಾರ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಇತ್ತೀಚಿಗಿನ ವರ್ಷಗಳಲ್ಲಿ ಚೀನಾವು ಯುರೋಪ್ ಖಂಡದಲ್ಲೂ ತನ್ನ ಸ್ನೇಹ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದು, ಅದರಂತೆ ಫ್ರಾನ್ಸ್‌ಗೆ ಕೂಡ ಭೇಟಿ ನೀಡಲಾಗಿದೆ.