ಸ್ವ-ಸಾಮರ್ಥ್ಯದ ಮೂಲಕ ಅಭಿವೃದ್ಧಿ ಹೊಂದಬೇಕು


ದಾವಣಗೆರೆ ಜು.೨೭;ಜನರು ಸರ್ಕಾರದ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳುವ ಜೊತೆಗೆ ಸ್ವ-ಸಾಮಥ್ರ್ಯದ ಮೂಲಕ ಅಭಿವೃದ್ಧಿಯ ಬಗ್ಗೆ ಚಿಂತಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಎ.ಚನ್ನಪ್ಪ ಹೇಳಿದರು.ಜಿಲ್ಲಾ ಪಂಚಾಯತ್ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ವತಿಯಿಂದ  ನಗರದ ಪಶು ಆಸ್ಪತ್ರೆ ಆವರಣದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ರೈತ ಸ್ವ-ಸಹಾಯ ಗುಂಪಿನ ಮಹಿಳಾ ಉತ್ಪಾದಕರ ಗುಂಪುಗಳಿಗೆ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯ ತಾಂತ್ರಿಕ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಭಾರತೀಯ ಪಾರಂಪರಿಕ ಕಸುಬುಗಳು ನಶಿಸಿ ನಿರುದ್ಯೋಗ ಹೆಚ್ಚುತ್ತಿದೆ. ಹಿಂದೆ ಒಕ್ಕಲುತನ ಎತ್ತುಗಳ ಮೇಲೆ ಅವಲಂಬಿತವಾಗಿತ್ತು, ರೈತರು ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಬೆಳೆ ಬೆಳೆಯುತ್ತಿದ್ದರು. ಜನರು ಪರಸ್ಪರ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ವ್ಯವಸಾಯದಲ್ಲಿ ನೆಮ್ಮದಿ ಕಾಣುತ್ತಿದ್ದರು. ಆದರೆ ಆಧುನಿಕ ದಿನಮಾನಗಳಲ್ಲಿ ಹಣ ಕೊಟ್ಟು ಎಲ್ಲ ಅಗತ್ಯಗಳನ್ನು ಪೂರೈಸಿಕೊಂಡು ವೈಭೋಗದ ಜೀವನಕ್ಕೆ ಹೊಂದಿಕೊಳ್ಳಲಾಗಿದೆ. ಆದ್ದರಿಂದ ತಾಂತ್ರಿಕವಾಗಿ ಮುಂದುವರೆದ ಯುಗದಲ್ಲಿ ರೈತರಿಗೆ ತಾಂತ್ರಿಕ ಮಾಹಿತಿ ಮತ್ತು ತರಬೇತಿ ಒದಗಿಸುವ ಉದ್ದೇಶದಿಂದ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ದೇಶವು ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕಾದರೆ ಪರಾವಲಂಬನೆ ಬಿಟ್ಟು, ಆಧುನಿಕತೆಗೆ ತಕ್ಕಂತೆ ಪಾರಂಪರಿಕ ವೃತ್ತಿಗಳಲ್ಲಿ ಜನರು ತೋಡಗಿಸಿಕೊಳ್ಳಬೇಕು ಎಂದರು.ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಪ್ರಾಸ್ತವಿಕವಾಗಿ ಮಾತನಾಡಿ, ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 2021-22 ನೇ ಸಾಲಿನಲ್ಲಿ ಜಾನುವಾರು ವಿಮೆ ಕಾರ್ಯಕ್ರಮಕ್ಕೆ ರೂ.32 ಲಕ್ಷ ಅನುದಾನ ನಿಗದಿಯಾಗಿದ್ದು, ಹೈನು-ರಾಸುಗಳನ್ನು 1 ವರ್ಷ ಮತ್ತು 3 ವರ್ಷದ ಅವಧಿಗೆ ವಿಮೆಗೊಳಪಡಿಸಬಹುದಾಗಿದೆ. ಗರಿಷ್ಠ ರೂ.70,000 ವರೆಗೆ ವಿಮಗೊಳಪಡಿಸಬಹುದಾಗಿದ್ದು, ಪ್ರೀಮಿಯಂನಲ್ಲಿ ಎಸ್‍ಸಿ, ಎಸ್‍ಟಿ, ಬಿಪಿಎಲ್ ಫಲಾನುಭವಿಗಳಿಗೆ ಶೇ.70 ಮತ್ತು ಎಪಿಎಲ್ ಫಲಾನುಭವಿಗಳಿಗೆ ಶೇ.50 ರಷ್ಟು ಸಹಾಯಧನ ಸೌಲಭ್ಯವಿದೆ. ಇದುವರೆಗೆ 1769 ರಾಸುಗಳನ್ನು ವಿಮೆಗೊಳಪಡಿಸಿದ್ದು ರೂ.22 ಲಕ್ಷ ಅನುದಾನವನ್ನು ಬಳಸಿಕೊಳ್ಳಲಾಗಿದೆ. ರಾಸುಗಳನ್ನು ವಿಮೆಗೊಳಪಡಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದ್ದು ಈ ಮಾಸಾಂತ್ಯದೊಳಗೆ ಗುರಿ ಸಾಧಿಸುವ ವಿಶ್ವಾಸವಿದೆ ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಪಾಲಿ ಕ್ಲಿನಿಕ್ ಉಪ ನಿರ್ದೇಶಕ ಡಾ.ವೀರೇಶ್ ಟಿ.ಆರ್, ಎನ್.ಆರ್.ಎಲ್.ಎಂ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಬೋಜರಾಜ್.ಎನ್.ಎಂ, ಸಂಪನ್ಮೂಲ ವ್ಯಕ್ತಿಗಳಾದ ಪಶುಪಾಲನಾ ಮತ್ತು ಪಶು ವೈದ್ಯಕೀಯ ತರಬೇತಿ ಕೇಂದ್ರದ ವೈದ್ಯಾಧಿಕಾರಿ ಡಾ.ಗುರುಶಾಂತಪ್ಪ ಬಿ.ಜಿ, ಪಶು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಸತೀಶ್ ಕೆ.ಜಿ, ಕುಂದೂರು ಪಶು ಚಿಕಿತ್ಸಾಲಯ ಹಿರಿಯ ಪಶು ವೈದ್ಯಾಧಿಕಾರಿ ಡಾ.ಜಿ.ಟಿ.ನವೀನ್‍ಕುಮಾರ್ ಸೇರಿದಂತೆ ವಿವಿಧ ಸ್ವ-ಸಹಾಯ ಸಂಘಗಳ ಸದಸ್ಯರು ಭಾಗವಹಿಸಿದ್ದರು.ಇದೇ ಸಂದರ್ಭದಲ್ಲಿ ರೈತರಿಗೆ ಮಾಹಿತಿ ಒದಗಿಸಲು ತಯಾರಿಸಿದ ಕೈಪಿಡಿ ಹಾಗೂ ಕರಪತ್ರಗಳನ್ನು ಬಿಡುಗಡೆಗೊಳಿಸಲಾಯಿತು.