ಸ್ವ-ಉದ್ಯೋಗದ ಮೂಲಕ ವಿಕಲಚೇತನರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಬೇಕು  


ಚಿತ್ರದುರ್ಗ.ಜು.೨೮;  ವಿಕಲಚೇತನರು ತಂದೆ ತಾಯಿ ಹಾಗೂ ಇತರರ ಮೇಲೆ ಅವಲಂಬನೆ ಆಗದೆ ಆರ್ಥಿಕವಾಗಿ ಸಬಲರಾಗಬೇಕು. ಸ್ವ-ಉದ್ಯೋಗದ ಮೂಲಕ ಬುದುಕು ರೂಪಿಸಿಕೊಳ್ಳಬೇಕು. ವಿಕಲಚೇತನರೂ ಸಹ ಉದ್ಯೋಗ ಪಡೆದುಕೊಳ್ಳುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜಿ.ಪಂ. ಸಿಇಓ ಡಾ.ಕೆ. ನಂದಿನಿದೇವಿ ಹೇಳಿದರು.ನಗರದ ವಾಸವಿ ಮಹಲ್‌ನಲ್ಲಿ  ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಬಳ್ಳಾರಿಯ ಸಮರ್ಥನಂ ಅಂಗವಿಕಲರ ಸಂಸ್ಥೆ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ಯುವ ವಿಕಲಚೇತನರ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.
ಇಂದು ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರುವ ಸಾಕಷ್ಟು ಯುವಕರಿಗೆ ಉದ್ಯೋಗ ಸಿಗುವುದು ಕಷ್ಟದಾಯಕವಾಗಿದೆ. ಸಮರ್ಥನಂ ಹಾಗೂ ಜಿಲ್ಲಾ ವಿಕಲಚೇತನರ ಕಲ್ಯಾಣ ಇಲಾಖೆ ಸಹಭಾಗಿತ್ವದಲ್ಲಿ ವಿಕಲಚೇತನರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಈ ಉದ್ಯೋಗ ಮೇಳ ಆಯೋಜಿಸಿದ್ದಾರೆ. ವಿಕಲಚೇತನರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಸರ್ಕಾರಿ ಹಾಗೂ ಖಾಸಗಿ ವಲಯದಲ್ಲಿ ಕಂಪ್ಯೂಟರ್ ಕೌಶಲ್ಯಾಧಾರಿತ ಹಲವು ಉದ್ಯೋಗ ಅವಕಾಶಗಳಿವೆ. ವಿಕಲಚೇತನರು ಇಂತಹ ಉದ್ಯೋಗಗಳನ್ನು ಪಡೆಯಲು ಕೌಶಲ್ಯಗಳಿಸಿಕೊಳ್ಳಬೇಕು ಎಂದರು.