
ಭಾಲ್ಕಿ:ಆ.2: ಯುವಕರು ರಕ್ತದಾನ ಮಾಡಲು ಹಿಂದೇಟು ಹಾಕದೇ ಸ್ವ-ಇಚ್ಛೆಯಿಂದ ರಕ್ತದಾನ ಮಾಡಿ ಜೀವನ ಸಾರ್ಥಕವಾಗಿಸಿಕೊಳ್ಳಬೇಕು ಎಂದು ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಸಂಚಾಲಕಿ ರಾಧಿಕಾ ಬಹನಜಿ ಹೇಳಿದರು.
ಪಟ್ಟಣದ ಕನಸೆ ಆಸ್ಪತ್ರೆಯಲ್ಲಿ ರೋಟರಿ ಕ್ಲಬ್ ಆಫ್ ಭಾಲ್ಕಿ ಫೋರ್ಟ್ ಮತ್ತು ಬ್ರೀಮ್ಸ್ ಸಹಯೋಗದಲ್ಲಿ ಆಯೋಜಿಸಿದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು,ರಕ್ತದಾನವು ಶ್ರೇಷ್ಠ ಹಾಗೂ ಪವಿತ್ರ ದಾನವಾಗಿದೆ.ರಕ್ತದಾನ ಮಾಡುವುದರಿಂದ ದಾನಿಯ ದೇಹದಲ್ಲಿ ಹೊಸ ರಕ್ತ ಉತ್ಪತ್ತಿಯಾಗುತ್ತದೆ ಹಾಗೂ ರಕ್ತದಲ್ಲಿ ಕೊಬ್ಬಿನಾಂಶ ಕಡಿಮೆ ಮಾಡಲು ಸಹಾಯವಾಗುತ್ತದೆ.ವಿಶೇಷವಾಗಿ ಹೇರಿಗೆ ಮತ್ತು ಅಪಘಾತ ಸಂದರ್ಭದಲ್ಲಿ ವಿವಿಧ ನಮೂನೆಯ ರಕ್ತದ ಗುಂಪಿನ ಅವಶ್ಯಕತೆಯಿರುವುದರಿಂದ ಯುವಕರು ವರ್ಷದಲ್ಲಿ ಒಮ್ಮೆಯಾದರೂ ರಕ್ತದಾನ ಮಾಡಬೇಕು.ನಿಮ್ಮ ರಕ್ತದ ಕೆಲವು ಹನಿಗಳಿಂದ ಇನ್ನೋಬ್ಬರ ಜೀವ ಉಳಿಯುತ್ತದೆ.ಕಾರಣ ಪ್ರತಿಯೊಬ್ಬರೂ ತಮ್ಮ ಸ್ವ-ಇಚ್ಛೆಯಿಂದ ರಕ್ತದಾನ ಮಾಡಲು ಮುಂದಾಗಬೇಕು ಎಂದು ಸಲಹೆ ನೀಡಿದರು.
ರೋಟರಿ ಕ್ಲಬ್ ಅಧ್ಯಕ್ಷ ಡಾ.ವಿಲಾಸ ಕನಸೆ ಮಾತನಾಡಿ, ಅಪಘಾತಕ್ಕೀಡಾದ ವ್ಯಕ್ತಿಗಳಿಗೆ ಹಾಗೂ ಗರ್ಭೀಣಿಯರಿಗೆ ರಕ್ತದ ಅವಶ್ಯಕತೆ ತುರ್ತಾಗಿರುವುದರಿಂದ ಹೆಣ್ಣು-ಗಂಡು ಎಂಬ ಭೇದವಿಲ್ಲದೆ 18 ರಿಂದ 65 ವರ್ಷದ ಆರೋಗ್ಯವಂತ ವ್ಯಕ್ತಿಗಳು ಉಲ್ಲಾಸದಿಂದ ರಕ್ತದಾನ ಮಾಡಬೇಕು ಎಂದು ಹೇಳಿದರು.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ದತ್ತಾತ್ರಿ ಕಾಟಕರ್ ಮಾತನಾಡಿ, ಎಲ್ಲ ದಾನಗಳಿಗಿಂತ ರಕ್ತದಾನ ಶ್ರೇಷ್ಠವಾಗಿದೆ ಎಂದರು.
ರಕ್ತದಾನ: ಇಬ್ಬರು ಯುವತಿಯರು ಸೇರಿದಂತೆ ಸುಮಾರು 96 ಜನ ರಕ್ತದಾನ ಮಾಡಿ ಇತರರಿಗೆ ಪ್ರೇರಣೆಯಾದರು.
ಈ ಸಂದರ್ಭದಲ್ಲಿ ಕಲ್ಯಾಣ ಝೋನದ ರೋಟರಿ ಸಹಾಯಕ ಗವರ್ನರ ಡಾ.ವಸಂತ ಪವಾರ, ಖಜಾಂಚಿ ಡಾ.ಶಶಿಕಾಂತ ಭೂರೆ,ಬೀದರನ ಡಾ.ಎಮ್.ಪಾಟೀಲ್ ಮತ್ತು ಮುಖಂಡರಾದ ಯಾದವರಾವ ಕನಸೆ,ಜಿಪಂ ಮಾಜಿ ಸದಸ್ಯ ಭಾರತಬಾಯಿ ಕನಸೆ,ಗೋವಿಂದರಾವ ಮೈನಾಳಿ,ಸಂತೋಷ ಶೆಡೋಳೆ,ಪುರಸಭೆ ಸದಸ್ಯ ಪಾಂಡುರಂಗ ಕನಸೆ,ಶಿವಾಜಿರಾವ ಜಗತಾಪ,ಪಾಟೀಲ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ನ್ಯಾಯವಾದಿ ಉಮಾಕಾಂತ ವಾರದ ಪ್ರಾಸ್ತಾವಿಕ ಮಾತನಾಡಿದರು.ಮಾಜಿ ಎಜಿ ಡಾ.ಅಮೀತ ಅಷ್ಟೂರೆ ಸ್ವಾಗತಿಸಿದರು. ಡಾ.ಗುಂಡೆರಾವ ಶೆಡೋಳೆ ನಿರೂಪಿಸಿದರು.ಪ್ರಾಚಾರ್ಯ ಅಶೋಕ ರಾಜೋಳೆ ವಂದಿಸಿದರು.