ಸ್ವೇಚ್ಚಾಚಾರದ ಬದುಕಿಗೆ ಕಡಿವಾಣ ಹಾಕಿ

ತಿಪಟೂರು, ಜ. ೧೩- ಸ್ವೇಚ್ವಾಚಾರದ ಬದುಕಿಗೆ ಕಡಿವಾಣ ಹಾಕಿದರೆ ಏಡ್ಸ್‌ನಂತಹ ಮಹಾಮಾರಿ ರೋಗವನ್ನು ತಡೆಯಬಹುದು ಎಂದು ತಿಪಟೂರು ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಹೆಚ್. ಬಿ ಕುಮಾರಸ್ವಾಮಿ ಹೇಳಿದರು.
ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಯಾವುದೇ ರೋಗ ಬಂದ ನಂತರ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬಾರದಂತೆ ಆರೋಗ್ಯವನ್ನು ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಾನವ ಜನ್ಮ ದೊಡ್ಡದು, ಜೋಸ್‌ಗಳ ಜತೆ ಜೀವನವನ್ನು ಜೋಪಾನ ಮಾಡಿಕೊಳ್ಳಿ. ಕೆಟ್ಟ ಅಭ್ಯಾಸಗಳನ್ನು ಬಿಟ್ಟು, ವಿದ್ಯಾರ್ಥಿ ಜೀವನದಲ್ಲಿ ಉತ್ತಮ ಅಂಕ ಗಳಿಸುವ ಕಡೆ ಹೆಚ್ಚು ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ತಿಪಟೂರು ತಾಲ್ಲೂಕು ಸರ್ಕಾರಿ ಆಸ್ಪತ್ರೆಯ ಐಸಿಟಿಸಿ ಅಧಿಕಾರಿ ಉಮೇಶ್ ಮಾತನಾಡಿ, ಎಚ್‌ಐವಿ ಬಗ್ಗೆ ಸರಿಯಾದ ಮಾಹಿತಿ ಕೊರತೆಯಿಂದ ಪ್ರಸ್ತುತ ಹೆಚ್ಚು ಮಂದಿ ಯುವಕರು ಏಡ್ಸ್ ರೋಗಕ್ಕೆ ಬಲಿಯಾಗುತ್ತಿರುವುದು ವಿಷಾದನೀಯ ಎಂದರು.
ಬದಲಾಗುತ್ತಿರುವ ಸಾಮಾಜಿಕ ಮತ್ತು ಕೌಟುಂಬಿಕ ವಾತಾವರಣದಿಂದ ಹೆಚ್ಚು ಮಂದಿ ಯುವಕರು ರೋಗಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳು ಎಚ್ಚರ ವಹಿಸಬೇಕು ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಾಲೇಜಿನ ಐಕ್ಯೂಎಸಿ ಸಂಚಾಲಕ ಡಾ. ಟಿ. ವೆಂಕಟಚಲಯ್ಯ ಮಾತನಾಡಿ, ಯವ್ವೌನಕ್ಕೆ ಕಾಲಿಟ್ಟ ವಿದ್ಯಾರ್ಥಿಗಳು ದೇಹ ಮತ್ತು ಮನಸ್ಸುನ್ನು ಆರೋಗ್ಯವಾಗಿ ಇಟ್ಟುಕೊಳ್ಳಿ. ಅಪಾಯಕಾರಿಯಾದ ಏಡ್ಸ್ ರೋಗದಿಂದ ದೂರವಿರಿ ಎಂದರು.
ಕಾರ್ಯಕ್ರಮದಲ್ಲಿ ರೆಡ್ ರಿಬ್ಬನ್ ಕ್ಲಬ್ ಸಂಚಾಲಕ ಕೆ. ನಾಗರಾಜು ಸ್ವಾಗತಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಅನುಪ್ರಸಾದ್ ಕೆ.ಆರ್.ಕಾರ್ಯಕ್ರಮ ನಿರೂಪಿಸಿದರು. ಎನ್‌ಎಸ್‌ಎಸ್ ಅಧಿಕಾರಿ ಚಿಕ್ಕ ಹೆಗಡೆ ವಂದಿಸಿದರು.
ಏಡ್ಸ್ ಬಗ್ಗೆ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಇದೇ ಸಂದರ್ಭದಲ್ಲಿ ಪ್ರಶಸ್ತಿ ಫಲಕವನ್ನು ವಿತರಿಸಲಾಯಿತು.